ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ, ಉದ್ಯಮಿ ರತನ್ ಟಾಟಾ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ನಡುವೆ ರತನ್ ಟಾಟಾ ಅವರ ಜೀವನದ ಬಗ್ಗೆ, ಅವರು ವಿವಾಹವಾಗದ ಹಿಂದಿರುವ ಕಾರಣದ ಬಗ್ಗೆ, ಅವರ ಪ್ರೇಮ ಕಥೆಯ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ನಾಲ್ಕು ಬಾರಿ ವಿವಾಹವಾಗುವ ಬಗ್ಗೆ ಚಿಂತನೆ ನಡೆಸಿದ್ದ ರತನ್ ಟಾಟಾ ಅವರು ಅವಿವಾಹಿತರಾಗಿಯೇ ಉಳಿದರು.
ಪದ್ಮಭೂಷಣ ಮತ್ತು ಪದ್ಮವಿಭೂಷಣ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ರತನ್ ಟಾಟಾ ಅವರು ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಕಥೆಯ ಬಗ್ಗೆ, ತಾನು ವಿವಾಹವಾಗದಿರುವ ಬಗ್ಗೆ ಮಾತನಾಡಿದ್ದರು.
ಇದನ್ನು ಓದಿದ್ದೀರಾ? ಉದ್ಯಮಿ ರತನ್ ಟಾಟಾ ಕೊನೆಯ ಪೋಸ್ಟ್ ವೈರಲ್; ಏನಿದೆ ಪೋಸ್ಟ್‌ನಲ್ಲಿ?
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರತನ್ ಟಾಟಾ, “ಒಂಟಿಯಾಗಿರುವುದು ಹೇಗಿರುತ್ತದೆ ಎಂದು ನಿಮಗೆ ತಿಳಿದಿಲ್ಲ. ನೀವೊಬ್ಬರೇ ಸಮಯ ಕಳೆಯಬೇಕಾದ ಪರಿಸ್ಥಿತಿ ಬಂದಾಗ ನೀವು ಅದನ್ನು ಅರಿತುಕೊಳ್ಳುವಿರಿ” ಎಂದು ಹೇಳಿದ್ದರು. ಜೊತೆಗೆ ತನ್ನ ಪ್ರೇಮ ಕಥೆಯನ್ನೂ ಹೇಳಿದ್ದರು.
ಮುಳುವಾದ ಭಾರತ-ಚೀನಾ ಯುದ್ಧ
ರತನ್ ಟಾಟಾ ಅವರು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿದ್ದಾಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು. ಆದರೆ ತನ್ನ ಅಜ್ಜಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ರತನ್ ಟಾಟಾ ಅವರು ಭಾರತಕ್ಕೆ ಮರಳಬೇಕಾದ ಅನಿವಾರ್ಯ ಉಂಟಾಯಿತು.
ತನ್ನನ್ನು ಪ್ರೀತಿಸುವ ಯುವತಿಯೂ ಕೂಡಾ ತನ್ನೊಂದಿಗೆ ಭಾರತಕ್ಕೆ ಬರಬಹುದು ಎಂದು ರತನ್ ಟಾಟಾ ಅಂದುಕೊಂಡಿದ್ದರು. ಆದರೆ ಯುವತಿಯನ್ನು ಭಾರತಕ್ಕೆ ಕಳುಹಿಸಲು ಆಕೆಯ ಪರಿವಾರ ಒಪ್ಪಲಿಲ್ಲ. ಭಾರತ-ಚೀನಾ ಯುದ್ಧವೇ ರತನ್ ಟಾಟಾ ಪ್ರೀತಿಗೆ ಮುಳುವಾಯ್ತು.
ಇದನ್ನು ಓದಿದ್ದೀರಾ? ರತನ್ ಟಾಟಾ | ಬಂಡವಾಳಶಾಹಿಗಳ ರತ್ನ – ಸಮಾಜವಾದಿ ಆಶಯಗಳ ದುಸ್ವಪ್ನ?
ಹೌದು, ರತನ್ ಟಾಟಾ ಅವರು ಸಂದರ್ಶನದಲ್ಲಿ ಹೇಳಿದ್ದಂತೆ, “1962ರ ಇಂಡೋ-ಚೀನಾ ಯುದ್ಧದ ಕಾರಣ, ಆಕೆಯ ಪೋಷಕರು ಭಾರತಕ್ಕೆ ಬರಲು, ಆಕೆಯನ್ನು ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ. ಇದರಿಂದಾಗಿ ಸಂಬಂಧವು ಕೊನೆಗೊಂಡಿತು”
ಬಾಲಿವುಡ್ ಸ್ಟಾರ್‌ನೊಂದಿಗೆ ಪ್ರೀತಿ?
ರತನ್ ಟಾಟಾ ಮತ್ತು ಬಾಲಿವುಡ್ ನಟಿ ಸಿಮಿ ಗರೆವಾಲ್ ನಡುವೆಯೂ ಒಮ್ಮೆ ಪ್ರೇಮಾಂಕುರ ಅರಳಿತ್ತು. ವರದಿಗಳ ಪ್ರಕಾರ ರತನ್ ಟಾಟಾ ಸಿಮಿ ಗರೆವಾಲ್ ಅವರನ್ನು ವಿವಾಹವಾಗುವ ನಿರ್ಧಾರವನ್ನು ಮಾಡಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಅವರ ಸಂಬಂಧವೇ ಮುರಿದುಬಿತ್ತು.
ಇನ್ನು ಸಂದರ್ಶನವೊಂದರಲ್ಲಿ “ನನಗೆ ನಾಲ್ಕು ಬಾರಿ ವಿವಾಹವಾಗಬೇಕು ಎಂದು ಅನಿಸಿತ್ತು. ಆದರೆ ವಿವಾಹವಾಗಲಿಲ್ಲ” ಎಂದು ಹೇಳಿಕೊಂಡಿದ್ದರು.
