ನನಗೆ ಮಾಫಿಯಾ, ಗೂಂಡಾಗಳು ಅಥವಾ ಅಪರಾಧಿಗಳ ಭಯವಿಲ್ಲ. ಯಾರದೇ ಬೆದರಿಕೆಗೆ ಮಣಿದು ತೀರ್ಪು ನೀಡುವ ಬದಲು ಪ್ರಾಣತ್ಯಾಗಕ್ಕೂ ಸಿದ್ಧ. ಹೇಡಿ ಎನಿಸಿಕೊಳ್ಳುವುದಕ್ಕಿಂತ ಸಾಯುವುದೇ ಲೇಸು ಎಂದು ಉತ್ತರ ಪ್ರದೇಶದ ಮುಜಫ್ಫರ್‌ನಗರದ ನ್ಯಾಯಾಧೀಶ ರವಿ ಕುಮಾರ್ ದಿವೇಕರ್ ಹೇಳಿದ್ದಾರೆ.
ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣವೊಂದರಲ್ಲಿ ಆರೋಪಿಯನ್ನು ಅಪರಾಧಿಯೆಂದು ಘೋಷಿಸಿ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಧೀಶ ರವಿ ಕುಮಾರ್ ತೀರ್ಪು ನೀಡಿದ್ದಾರೆ. ಈ ವೇಳೆ, ಭಯ-ಬೆದರಿಕೆಯ ಬಗ್ಗೆ ಪ್ರಸ್ತಾಪಿಸಿದ ಅವರು, “ದೇವರಿಗೆ ಮಾತ್ರ ಹೆದರಬೇಕೆಂದು ನಮ್ಮ ಪೋಷಕರು ಕಲಿಸಿಕೊಟ್ಟಿದ್ದಾರೆ. ಹೀಗಾಗಿ, ಯಾವುದೇ ಬಾಹ್ಯ ಶಕ್ತಿಗಳಿಗೆ ಅಂಜಿ ಕಾರ್ಯನಿರ್ವಹಿಸುವುದಿದ್ದರೆ, ಪವಿತ್ರವಾದ ನ್ಯಾಯಾಂಗ ಹುದ್ದೆಗೆ ರಾಜೀನಾಮೆ ನೀಡುವುದೇ ಸೂಕ್ತ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರವಿ ಕುಮಾರ್ ಅವರು ಕಳೆದ ನಾಲ್ಕು ತಿಂಗಳುಗಳಲ್ಲಿ (ಏಪ್ರಿಲ್ 6 ರಿಂದ ಜುಲೈ 17) 7 ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಒಟ್ಟು 22 ಜನರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು. ಈ ಹಿನ್ನೆಲೆಯಲ್ಲಿ, ಆಗಸ್ಟ್ 18ರಂದು ಮುಜಫ್ಫರ್‌ನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತಾತ್ಮಕ ಆದೇಶದಂತೆ ಅವರ ಬಳಿಯಿದ್ದ 97 ಕೊಲೆ ಪ್ರಕರಣಗಳನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ನಿಯಮಗಳ ಪ್ರಕಾರ, ಸತ್ರ ನ್ಯಾಯಾಲಯ ನೀಡುವ ಯಾವುದೇ ಮರಣದಂಡನೆ ಶಿಕ್ಷೆಯು ಹೈಕೋರ್ಟ್‌ನಿಂದ ಅನುಮೋದನೆಗೊಳ್ಳಬೇಕಾಗುತ್ತದೆ. ಅದರಂತೆ, ರವಿ ಕುಮಾರ್ ದಿವೇಕರ್ ನೀಡಿದ ತೀರ್ಪುಗಳು ಮತ್ತು ಅಪರಾಧಿಗಳ ಮೇಲ್ಮನವಿಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ.
2009ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಆರಂಭಿಸಿದ ದಿವೇಕರ್, 2025ರ ನವೆಂಬರ್‌ನಿಂದ ಮುಜಫ್ಫರ್‌ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು 2022ರಲ್ಲಿ ವಾರಾಣಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಾಫಿಕ್ ಸಮೀಕ್ಷೆಗೆ ಆದೇಶಿಸಿ ದೇಶಾದ್ಯಂತ ಸುದ್ದಿಯಾಗಿದ್ದರು.




