ಬಿಹಾರದಲ್ಲಿ ದಲಿತ ಒಳಮೀಸಲಾತಿ ಕುರಿತು ರಾಜಕೀಯ ತಿಕ್ಕಾಟ ಜೋರಾಗಿದೆ. ಇದೇ ಸಂದರ್ಭದಲ್ಲಿ ಒಂದು ವೈರುಧ್ಯವೂ ಬೆಳಕಿಗೆ ಬಂದಿದೆ. ಒಂದೆಡೆ ದಲಿತರನ್ನು ಪ್ರತಿನಿಧಿಸುವ ನಾಯಕರ ಸಂಪತ್ತು ವರ್ಷದಿಂದ ವರ್ಷಕ್ಕೆ ನೂರಾರು ಪಟ್ಟು ಹೆಚ್ಚುತ್ತಿದ್ದರೆ, ಅದೇ ಸಮುದಾಯದ ಬಹುಪಾಲು ಜನ ಇಂದಿಗೂ ಒಂದು ಹೊತ್ತಿನ ಊಟ, ಕನಿಷ್ಟ ಸೂರಿಗಾಗಿ ಪರದಾಡುತ್ತಿದ್ದಾರೆ. ‘ಮೀಸಲಾತಿ ಯಾಕೆ ಬೇಕು?’ ಎಂದು ಪ್ರಶ್ನಿಸುವವರು, ʼಮೀಸಲಾತಿಯ ಲಾಭ ಯಾರ ಪಾಲಾಗುತ್ತಿದೆ? ಎಂಬುದನ್ನೂ ಕೇಳುವಂತೆ ಮಾಡುವ ಕಟು ವಾಸ್ತವ ಇದು.
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿರುವ ದಲಿತ ನಾಯಕರೇ ಮೀಸಲಾತಿ ವಿಚಾರದಲ್ಲಿ ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಮೀಸಲಾತಿ ವ್ಯವಸ್ಥೆಯ ಮರುಪರಿಶೀಲನೆಗೆ ಒತ್ತಾಯಿಸುತ್ತಿದ್ದರೆ, ಇತ್ತ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಇದಕ್ಕೆ ಭಿನ್ನನಿಲುವು ವ್ಯಕ್ತಪಡಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಹಾರದ ದಲಿತ ಸಮುದಾಯದ ಸಾಮಾನ್ಯ ಜನರ ಬದುಕು ಮತ್ತು ಅವರನ್ನೇ ಪ್ರತಿನಿಧಿಸುವ ರಾಜಕೀಯ ನಾಯಕರ ಆರ್ಥಿಕ ಸ್ಥಿತಿಯನ್ನು ಒರೆಗೆ ಹಚ್ಚಿ ʼದೈನಿಕ್ ಭಾಸ್ಕರ್ʼ ಸಮೀಕ್ಷೆಯೊಂದನ್ನ ನಡೆಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ಗಳಲ್ಲಿನ ಮಾಹಿತಿಯನ್ನು ಆಧರಿಸಿ, ಕಳೆದ ಹಲವು ವರ್ಷಗಳಲ್ಲಿ ದಲಿತ ನಾಯಕರ ಆಸ್ತಿಯಲ್ಲಿ ಆಗಿರುವ ಏರಿಕೆಯನ್ನು ಪರಿಶೀಲಿಸಿದೆ. ಮತ್ತೊಂದೆಡೆ, ಬಿಹಾರದ ವಿವಿಧ ಜಿಲ್ಲೆಗಳಲ್ಲಿರುವ ಸಾಮಾನ್ಯ ಪರಿಶಿಷ್ಟ ಜಾತಿ (SC) ಕುಟುಂಬಗಳ ಜೀವನಮಟ್ಟವನ್ನೂ ಪರಿಶೀಲಿಸಿದೆ. ಈ ಸಮೀಕ್ಷಾ ವರದಿಯಲ್ಲಿ ಒಂದೆಡೆ ಇನ್ನೂ ದಿನಗೂಲಿ, ಗುಡಿಸಲು ಮನೆ, ಶಿಕ್ಷಣ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ದಲಿತ ಕುಟುಂಬಗಳು ಕಂಡುಬಂದರೆ, ಮತ್ತೊಂದೆಡೆ ಅವರ ಪ್ರತಿನಿಧಿಗಳೆಂದು ಗುರುತಿಸಿಕೊಂಡಿರುವ ಹಲವು ನಾಯಕರ ಆಸ್ತಿಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಪೂರ್ಣಿಯಾದ ಚಾಂದಿ ಗ್ರಾಮದ ನಿವಾಸಿ ಸುರೇಶ್ ಋಷಿ ಅವರ ಕುಟುಂಬ ಇಂದಿಗೂ ಹುಲ್ಲು ಮತ್ತು ಒಣಗಿದ ಗಿಡಗಳಿಂದ ನಿರ್ಮಿಸಿದ ಫೂಸ್ ಮನೆಯಲ್ಲೇ ವಾಸಿಸುತ್ತಿದೆ. ಎರಡು ಕೊಠಡಿಗಳ ಈ ಮನೆಯಲ್ಲಿ ಒಟ್ಟು 16 ಮಂದಿ ಬದುಕುತ್ತಿದ್ದಾರೆ. ಮಳೆ ಬಂದಾಗ ಮನೆಯೊಳಗೆ ನೀರು ನುಗ್ಗುವುದರಿಂದ ಸರ್ಕಾರಿ ಕಟ್ಟಡದ ವರಾಂಡಾದಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಇದೆ. ಸುರೇಶ್ ಋಷಿ ಅವರೇ ಹೇಳುವಂತೆ, ಅವರ ತಾತ, ತಂದೆ ಮತ್ತು ತಾವು ಸೇರಿದಂತೆ ಮೂರು ತಲೆಮಾರುಗಳಿಂದ ಕುಟುಂಬ ಕೂಲಿ ಕೆಲಸ ಮಾಡಿಕೊಂಡೇ ಬಂದಿದೆ. ಮುಂದಿನ ತಲೆಮಾರೂ ಇದೇ ಕೆಲಸ ಮಾಡಬೇಕಾಗುತ್ತದೆ ಎಂಬ ಆತಂಕ ಅವರದ್ದು.
ಪೂರ್ಣಿಯಾದ ಮತ್ತೊಬ್ಬ ನಿವಾಸಿ ಜದ್ದೂ ಅವರ ಕುಟುಂಬದಲ್ಲಿ ಸುಮಾರು 20 ಮಂದಿ ಇದ್ದಾರೆ. ತಮ್ಮ ಬದುಕಿನಲ್ಲಿ ಮೀಸಲಾತಿಗೆ ಯಾವುದೇ ಅರ್ಥವಿಲ್ಲ, ಅದರ ಪ್ರಯೋಜನವೂ ಸಿಕ್ಕಿಲ್ಲ ಎನ್ನುತ್ತಾರವರು. ಮಳೆಗಾಲದಲ್ಲಿ ಮನೆಯ ಮೇಲ್ಛಾವಣಿಯಿಂದ ನಿರಂತರವಾಗಿ ನೀರು ಸೋರುವುದರಿಂದ ಇಡೀ ರಾತ್ರಿ ಎಚ್ಚರವಾಗಿಯೇ ಕಳೆಯಬೇಕಾಗುತ್ತದೆ. ತಮ್ಮ ತಂದೆ ಯಾವ ಪರಿಸ್ಥಿತಿಯಲ್ಲಿ ಬದುಕಿದ್ದರೋ, ಅದಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿ ತಾವು ಬದುಕುತ್ತಿದ್ದೇವೆ ಎಂಬುದು ಜದ್ದೂ ಅವರ ಅಳಲು.
ಹಾಜಿಪುರದ ಮಥನಾ ಮಲಿಕ್ ಗ್ರಾಮದ ಪರಮೇಶ್ವರ್ ಪಾಸ್ವಾನ್ ಅವರ ಕುಟುಂಬದ ಪರಿಸ್ಥಿತಿಯಲ್ಲಿ ಶಿಕ್ಷಣದಿಂದ ಸ್ವಲ್ಪ ಬದಲಾವಣೆ ಬಂದಿದೆ. ಅವರ ತಂದೆ ಮತ್ತು ತಾತರು ತಾಳೆ ಮರ ಹತ್ತಿ ತಾಡಿ ಮಾರುತ್ತಲೇ ಜೀವನ ಕಳೆದಿದ್ದರು. ಆದರೆ ಪರಮೇಶ್ವರ್ ಪಾಸ್ವಾನ್ ತಾಡಿ ಮಾರಾಟದ ಬದಲು ಕೃಷಿ ಮಾಡಲು ಆರಂಭಿಸಿದರು. ಕಳೆದ 30 ವರ್ಷಗಳಲ್ಲಿ ಸ್ವಂತ ಜಮೀನು ಖರೀದಿಸಲು ಸಾಧ್ಯವಾಗಿಲ್ಲ. ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಕುಟುಂಬದ ಖರ್ಚಿಗಾಗಿ ಖಾಸಗಿ ವಲಯದಲ್ಲಿ ಜೀವನೋಪಾಯ ಯೋಜನೆಯೊಂದರಲ್ಲಿ ಅಕೌಂಟೆಂಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ತಾವು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಕುಟುಂಬದ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಅವರು ಹೇಳುತ್ತಾರೆ. ತಮ್ಮ ನಾಲ್ವರು ಮಕ್ಕಳನ್ನೂ ಮೆಟ್ರಿಕ್ಗಿಂತ ಹೆಚ್ಚಿನ ಶಿಕ್ಷಣ ಕೊಡಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಬಿಎ ಪದವಿ ಪೂರ್ಣಗೊಳಿಸಿದ್ದಾರೆ. ಸೊಸೆ ಕೂಡ ಬಿಎ ಓದುತ್ತಿದ್ದಾರೆ. ಆದರೆ ಕುಟುಂಬದ ಯಾರಿಗೂ ಇದುವರೆಗೆ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ.
ಬೋಧಗಯಾದ ರಾಮವೃಕ್ಷ ಮಾಂಝಿ ರಾಜಮಿಸ್ತ್ರಿಯೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರ ತಂದೆಯೂ ಕೂಲಿ ಕೆಲಸ ಮಾಡುತ್ತಲೇ ಮೃತಪಟ್ಟಿದ್ದರು. ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯ ಕೂಲಿ ಕೆಲಸದಲ್ಲೇ ಕಳೆದಿದ್ದು, ತಮ್ಮ ನಂತರ ಮಕ್ಕಳೂ ಇದೇ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಕೇಳಿದಾಗ, ಹಿಂದೆ ದಿನಗೂಲಿ ಕಡಿಮೆಯಿತ್ತು. ಈಗ ಸ್ವಲ್ಪ ಹೆಚ್ಚಾಗಿದೆ ಎಂಬುದಷ್ಟೇ ಅವರ ಉತ್ತರ.
ದರ್ಭಾಂಗಾದ ಸಿಂಘ್ವಾಡಾ ಪ್ರಖಂಡದ ಭರವಾಡಾ ಗ್ರಾಮದ ಪೂಜಾ ದೇವಿ ಡೋಮ್ ಸಮುದಾಯಕ್ಕೆ ಸೇರಿದವರು. ಅವರ ಮನೆಯ ಗೋಡೆಗೆ ಟಿನ್ ಶೀಟ್ ಹೊದಿಸಲಾಗಿದೆ. ಬಿದಿರಿನ ಬಾಗಿಲು ಆ ಮನೆಗೆ. ಮೇಲ್ಛಾವಣಿಯನ್ನು ಪ್ಲಾಸ್ಟಿಕ್ನಿಂದ ಮುಚ್ಚಲಾಗಿದೆ. ಅವರ ತಂದೆ-ತಾತರೂ ಇದೇ ರೀತಿಯ ಮನೆಯಲ್ಲಿ ಬದುಕು ಕಳೆದಿದ್ದರು. ಈಗ ಅವರ ಮಕ್ಕಳಿಗೂ ಇದೇ ಮನೆ ಆಸರೆಯಾಗಿದೆ. ಸಮಾಜದಲ್ಲಿ ತಮ್ಮನ್ನು ಕೀಳು ಜನರಂತೆ ಕಾಣಲಾಗುತ್ತದೆ. ಹೀಗಿರುವಾಗ ಗೌರವ ಎಲ್ಲಿ ಸಿಗುತ್ತದೆ ಎಂದು ಪೂಜಾ ದೇವಿ ಪ್ರಶ್ನಿಸುತ್ತಾರೆ.
ಭೋಜ್ಪುರ ಜಿಲ್ಲೆಯ ರಾಮನಗರ ಗ್ರಾಮದ ವಿಶ್ವಕರ್ಮ ರಾಮ್ ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡು 11 ಮಂದಿ ಸದಸ್ಯರ ಕುಟುಂಬವನ್ನು ಸಾಕುತ್ತಿದ್ದಾರೆ. ಇದೇ ಆದಾಯದಿಂದ ನಾಲ್ವರು ಮಕ್ಕಳನ್ನು ಪದವಿ ಮತ್ತು ಸ್ನಾತಕೋತ್ತರ ಮಟ್ಟದವರೆಗೆ ಓದಿಸಿದ್ದಾರೆ. ಮೀಸಲಾತಿಯ ಹೆಸರಿನಲ್ಲಿ ಕೇವಲ ಗದ್ದಲ ನಡೆಯುತ್ತಿದೆ. ನಿಜವಾಗಿ ಅಗತ್ಯವಿರುವವರು ಇಂದಿಗೂ ಅದರ ಪ್ರಯೋಜನದಿಂದ ದೂರವಾಗಿದ್ದಾರೆ. ಓದಿದ ತಮ್ಮ ಮಗನಿಗೇ ಉದ್ಯೋಗ ಸಿಗದಿದ್ದರೆ ಮೀಸಲಾತಿಯ ಪ್ರಯೋಜನ ಯಾರಿಗೆ ಎಂಬುದು ಅವರ ಪ್ರಶ್ನೆ.
ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಾಮಾನ್ಯ SC ಕುಟುಂಬಗಳ ಜೀವನದ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಅವರನ್ನು ಪ್ರತಿನಿಧಿಸುವ ಪ್ರಮುಖ ದಲಿತ ನಾಯಕರ ಆಸ್ತಿ ವಿವರಗಳನ್ನೂ ಪರಿಶೀಲಿಸಲಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ಗಳ ಮಾಹಿತಿಯ ಪ್ರಕಾರ ಹಲವು ನಾಯಕರ ಆಸ್ತಿ ಕಳೆದ ಒಂದು ಅಥವಾ ಎರಡು ದಶಕಗಳಲ್ಲಿ ಹಲವು ಪಟ್ಟು ಏರಿಕೆಯಾಗಿದೆ.
ಚಿರಾಗ್ ಪಾಸ್ವಾನ್ ಮೀಸಲಾತಿ ವಿಚಾರದಲ್ಲಿ ಪ್ರಬಲವಾಗಿ ಧ್ವನಿ ಎತ್ತುತ್ತಿರುವ ದಲಿತ ನಾಯಕರಲ್ಲಿ ಒಬ್ಬರು. ಬಾಲಿವುಡ್ನಲ್ಲಿ ನಟನಾಗಿಯೂ ಕೆಲಸ ಮಾಡಿದ್ದ ಅವರು, ರಾಜಕೀಯಕ್ಕೆ ಬಂದ ನಂತರವೂ ಐಷಾರಾಮಿ ಜೀವನಶೈಲಿಗೆ ಹೆಸರಾಗಿದ್ದಾರೆ. ಹೇರ್ಸ್ಟೈಲ್ನಿಂದ ಹಿಡಿದು ಡಿಸೈನರ್ ಬಟ್ಟೆಗಳವರೆಗೆ ಅವರ ಆಸಕ್ತಿ ಮುಂದುವರಿದಿದೆ. ಪ್ರಸಿದ್ಧ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರಿಂದಲೇ ಕೂದಲು ಕತ್ತರಿಸಿಕೊಳ್ಳುತ್ತಾರೆ ಎಂದು ವರದಿ ಹೇಳುತ್ತದೆ. ಪಾಟ್ನಾದ ಶ್ರೀಕೃಷ್ಣಾಪುರಿಯಂತಹ ಪ್ರಮುಖ ಪ್ರದೇಶದಲ್ಲಿ ₹1 ಕೋಟಿಗೂ ಹೆಚ್ಚು ಮೌಲ್ಯದ ಮನೆ ಹೊಂದಿದ್ದಾರೆ. ದೆಹಲಿಯ ಸುನಹರಿ ಬಾಗ್ ಪ್ರದೇಶದಲ್ಲಿರುವ ಭವ್ಯ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಚಿರಾಗ್ ಪಾಸ್ವಾನ್ 2014ರಲ್ಲಿ ಜಮುಯಿ ಲೋಕಸಭಾ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಿದರು. ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದ ಬಳಿಕ 2024ರಲ್ಲಿ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಹಳೆಯ ಕ್ಷೇತ್ರವಾದ ಹಾಜಿಪುರಕ್ಕೆ ಮರಳಿದರು. ಜಮುಯಿ ಮತ್ತು ಹಾಜಿಪುರ ಎರಡೂ ಮೀಸಲು ಲೋಕಸಭಾ ಕ್ಷೇತ್ರಗಳಾಗಿವೆ. ಚುನಾವಣಾ ಅಫಿಡವಿಟ್ ಪ್ರಕಾರ 2014ರಲ್ಲಿ ಚಿರಾಗ್ ಅವರ ಒಟ್ಟು ಆಸ್ತಿ ₹1.40 ಕೋಟಿ ಇತ್ತು. 2024ರ ವೇಳೆಗೆ ಅದು ₹2.68 ಕೋಟಿಗೆ ಏರಿದೆ. ಅವರ ಬಳಿ ಫಾರ್ಚುನರ್ ಮತ್ತು ಜಿಪ್ಸಿ ಸೇರಿದಂತೆ ಹಲವು ಐಶಾರಾಮಿ ವಾಹನಗಳಿವೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅತ್ಯಂತ ಬಡ ಮುಸಹರ್ ಕುಟುಂಬದಿಂದ ಬಂದವರು. ಬಾಲ್ಯದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಅವರು ಇಂದು ದೆಹಲಿಯ 28 ಅಕ್ಬರ್ ರಸ್ತೆಯ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ Z+ ಭದ್ರತೆ ಇದ್ದು, CRPF ಕಮಾಂಡೊಗಳ ಭದ್ರತೆಯಲ್ಲಿ ಸಂಚರಿಸುತ್ತಾರೆ. ಬುಲೆಟ್ಪ್ರೂಫ್ ವಾಹನ ಸೇರಿದಂತೆ ಭದ್ರತಾ ಬೆಂಗಾವಲಿನೊಂದಿಗೆ ಪ್ರಯಾಣಿಸುತ್ತಾರೆ.
ಆದರೆ ಚುನಾವಣಾ ಅಫಿಡವಿಟ್ನಲ್ಲಿರುವ ಆಸ್ತಿ ಮೌಲ್ಯ ₹50 ಲಕ್ಷಕ್ಕಿಂತ ಕಡಿಮೆಯೇ ಇದೆ. 2014ರಲ್ಲಿ ₹23.60 ಲಕ್ಷ ಇದ್ದ ಅವರ ಆಸ್ತಿ 2019ರಲ್ಲಿ ₹35.94 ಲಕ್ಷಕ್ಕೆ ಏರಿತ್ತು. 2024ರಲ್ಲಿ ಅದು ₹30.20 ಲಕ್ಷಕ್ಕೆ ಇಳಿಕೆಯಾಗಿದೆ. ಗಯಾದ ಮಹಕಾರದಲ್ಲಿ ಅವರ ನಿವಾಸವಿದ್ದು, ಹಸುಗಳ ಜೊತೆಗೆ ರೈಫಲ್ ಹೊಂದಿರುವುದೂ ಅವರ ಆಸ್ತಿ ವಿವರಗಳಲ್ಲಿ ಕಾಣಿಸುತ್ತದೆ.
ಜೆಡಿಯುನ ಪ್ರಮುಖ ದಲಿತ ಮುಖವಾಗಿರುವ ಅಶೋಕ್ ಚೌಧರಿ ದಲಿತ ಸಮುದಾಯದ ಹಲವು ವಿಚಾರಗಳಲ್ಲಿ ಸಕ್ರಿಯವಾಗಿ ಮಾತನಾಡಿದ್ದಾರೆ. ಅವರು ಭದ್ರತಾ ಸಿಬ್ಬಂದಿಯೊಂದಿಗೆ ಹಾಗೂ ದುಬಾರಿ ವಾಹನಗಳಲ್ಲಿ ಸಂಚರಿಸುತ್ತಾರೆ. ವಿಧಾಯಕ, ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಲೋಕಸಭಾ ಚುನಾವಣೆಯನ್ನೂ ಎದುರಿಸಿದ್ದಾರೆ. 2009ರಿಂದ 2026ರವರೆಗಿನ 17 ವರ್ಷಗಳಲ್ಲಿ ಅವರ ಆಸ್ತಿ ಸುಮಾರು ಶೇ.526ರಷ್ಟು ಹೆಚ್ಚಾಗಿದೆ. 2009ರ ಅಫಿಡವಿಟ್ನಲ್ಲಿ ₹1.23 ಕೋಟಿ ಇದ್ದ ಆಸ್ತಿ 2026ರ ವೇಳೆಗೆ ₹7.70 ಕೋಟಿಗೆ ಏರಿದೆ. ಷೇರುಗಳು, ಬಾಂಡ್ಗಳು, ಹೂಡಿಕೆಗಳು ಮತ್ತು ಬ್ಯಾಂಕ್ ಠೇವಣಿಗಳ ರೂಪದಲ್ಲಿ ಚರಾಸ್ತಿ ಹೊಂದಿದ್ದಾರೆ. ಪಾಟ್ನಾದ ಬೋರಿಂಗ್ ರಸ್ತೆ ಮತ್ತು ಕದಮ್ಕುವಾನ್ ಪ್ರದೇಶಗಳಲ್ಲಿ ಮನೆಗಳಿವೆ.
ಬಿಹಾರ ಬಿಜೆಪಿಯ ಪ್ರಮುಖ ದಲಿತ ನಾಯಕರಲ್ಲಿ ಶಿವೇಶ್ ರಾಮ್ ಕೂಡ ಒಬ್ಬರು. ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅವರು ಇದೇ ವರ್ಷ ರಾಜ್ಯಸಭಾ ಚುನಾವಣೆಯಲ್ಲೂ ಗೆದ್ದಿದ್ದಾರೆ. ಇದಕ್ಕೂ ಮೊದಲು ಒಮ್ಮೆ ಶಾಸಕರಾಗಿದ್ದರು ಮತ್ತು ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದರು. 2010ರಿಂದ 2025ರ ಅವಧಿಯಲ್ಲಿ ಅವರ ಆಸ್ತಿ ಶೇ.1545ರಷ್ಟು ಏರಿಕೆಯಾಗಿದೆ. 2010ರಲ್ಲಿ ₹56.40 ಲಕ್ಷ ಇದ್ದ ಆಸ್ತಿ 2025ರಲ್ಲಿ ₹9.28 ಕೋಟಿಗೆ ಏರಿದೆ. ಭೋಜ್ಪುರ, ರಾಂಚಿ, ಬೊಕಾರೊ, ಪಾಟ್ನಾ ಮತ್ತು ಗುರುಗ್ರಾಮಗಳಲ್ಲಿ ಅವರ ಹೆಸರಿನಲ್ಲಿ ಜಮೀನು ಹಾಗೂ ಫ್ಲ್ಯಾಟ್ಗಳಿವೆ. ರಿವಾಲ್ವರ್ ಮತ್ತು ರೈಫಲ್ ಹೊಂದಿದ್ದಾರೆ. ಸ್ಕಾರ್ಪಿಯೊ, ಇನೋವಾ ಕ್ರಿಸ್ಟಾ ಮತ್ತು ಮಾರುತಿ ಕಾರುಗಳೂ ಇವೆ.
ಕಾಂಗ್ರೆಸ್ನ ಬಿಹಾರ ಘಟಕದ ಅಧ್ಯಕ್ಷರಾಗಿದ್ದ ರಾಜೇಶ್ ರಾಮ್ ದಲಿತ ವಿಚಾರಗಳಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತ ಬಂದಿದ್ದಾರೆ. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿರುವ ಅವರು ಎರಡು ಬಾರಿ ಶಾಸಕರಾಗಿದ್ದರು. ಆದರೆ 2025ರ ಚುನಾವಣೆಯಲ್ಲಿ ಸೋತಿದ್ದಾರೆ. 2015ರ ವಿಧಾನಸಭಾ ಚುನಾವಣೆಯ ಅಫಿಡವಿಟ್ನಲ್ಲಿ ಅವರ ಒಟ್ಟು ಆಸ್ತಿ ₹1.50 ಕೋಟಿ ಇತ್ತು. 2025ರ ಅಫಿಡವಿಟ್ನಲ್ಲಿ ಚರ ಮತ್ತು ಸ್ಥಿರ ಆಸ್ತಿ ಸೇರಿ ಒಟ್ಟು ಮೌಲ್ಯ ₹6 ಕೋಟಿಯಷ್ಟಾಗಿದೆ. ಜಮೀನು, ಬ್ಯಾಂಕ್ ಬ್ಯಾಲೆನ್ಸ್ ಜೊತೆಗೆ ಅವರ ಹೆಸರಿನಲ್ಲಿ ಪೆಟ್ರೋಲ್ ಪಂಪ್ ಕೂಡ ಇದೆ.
ಬಿಹಾರ ಸರ್ಕಾರದಲ್ಲಿ ಸಚಿವರಾಗಿದ್ದ ಶ್ಯಾಮ್ ರಜಕ್ ಕಳೆದ 20 ವರ್ಷಗಳಲ್ಲಿ ಆಸ್ತಿಯಲ್ಲಿ ಭಾರೀ ಏರಿಕೆ ಕಂಡಿರುವ ಮತ್ತೊಬ್ಬ ನಾಯಕ. 2005ರಲ್ಲಿ ಅವರು ಘೋಷಿಸಿದ್ದ ಒಟ್ಟು ಆಸ್ತಿ ಸುಮಾರು ₹20 ಲಕ್ಷ. 2025ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಅವರ ಒಟ್ಟು ಆಸ್ತಿ ₹5.14 ಕೋಟಿ.
ಇದನ್ನೂ ಓದಿ: ಒಳಮೀಸಲಾತಿ ಒಲವು ನಿಲುವು
ಬಿಜೆಪಿಯ ಹಿರಿಯ ನಾಯಕ ಜನಕ್ ರಾಮ್ ರಾಜ್ಯದ ಪ್ರಮುಖ ದಲಿತ ನಾಯಕರಲ್ಲಿ ಒಬ್ಬರು. ಅವರು ಸಂಸದ, ಶಾಸಕ ಹಾಗೂ ಬಿಹಾರ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಸುಮಾರು ₹1.05 ಕೋಟಿ ಆಸ್ತಿ ಘೋಷಿಸಿದ್ದರು. 2021ರ ಬಿಹಾರ ವಿಧಾನ ಪರಿಷತ್ ಚುನಾವಣೆಯ ವೇಳೆ ಅವರ ಒಟ್ಟು ಆಸ್ತಿ ಸುಮಾರು ₹1.50 ಕೋಟಿಗೆ ಏರಿತ್ತು. ವರದಿ ಪ್ರಕಾರ, 12 ವರ್ಷಗಳ ಅವಧಿಯಲ್ಲಿ ಅವರ ಆಸ್ತಿಯಲ್ಲಿ ಸುಮಾರು 10 ಪಟ್ಟು ಏರಿಕೆಯಾಗಿದೆ.
ದೀರ್ಘಕಾಲ ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿದ್ದ ಉದಯ್ ನಾರಾಯಣ್ ಚೌಧರಿ ಅವರ ಆಸ್ತಿಯಲ್ಲೂ ಏರಿಕೆಯಾಗಿದೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ₹98.27 ಲಕ್ಷ ಆಸ್ತಿ ಘೋಷಿಸಿದ್ದರು. 2025ರ ವಿಧಾನಸಭಾ ಚುನಾವಣೆಯ ವೇಳೆಗೆ ಅದು ₹1.31 ಕೋಟಿಗೆ ಏರಿದೆ. ಒಟ್ಟಾರೆ ಸುಮಾರು ಶೇ.33ರಷ್ಟು ಹೆಚ್ಚಳವಾಗಿದೆ.
ಜೆಡಿಯು ನಾಯಕ ಮಹೇಶ್ವರ್ ಹಜಾರಿ ಸಂಸದ, ಶಾಸಕ, ಸಚಿವ ಹಾಗೂ ವಿಧಾನಸಭೆಯ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 2014ರ ಲೋಕಸಭಾ ಚುನಾವಣೆಯ ಅಫಿಡವಿಟ್ನಲ್ಲಿ ಅವರು ₹2.15 ಕೋಟಿ ಆಸ್ತಿ ಘೋಷಿಸಿದ್ದರು. 2025ರ ವಿಧಾನಸಭಾ ಚುನಾವಣೆಯ ಅಫಿಡವಿಟ್ನಲ್ಲಿ ಅವರ ಒಟ್ಟು ಆಸ್ತಿ ₹10.85 ಕೋಟಿಯಾಗಿದೆ. ಅಂದರೆ ಸುಮಾರು 11 ವರ್ಷಗಳಲ್ಲಿ ಅವರ ಆಸ್ತಿ ಶೇ.404ಕ್ಕೂ ಹೆಚ್ಚು ಹೆಚ್ಚಾಗಿದೆ.
ಬಿಹಾರದ ಈ ಚಿತ್ರಣ ಮೀಸಲಾತಿ ಕುರಿತ ಚರ್ಚೆಯನ್ನು ರಾಜಕೀಯ ವ್ಯಾಪ್ತಿಯಿಂದ ಹೊರತಂದು, ಅದರ ಸಾಮಾಜಿಕ ಪರಿಣಾಮದತ್ತ ಕರೆದೊಯ್ಯುತ್ತದೆ. ಮೀಸಲಾತಿ ಪಡೆದ ಸಮುದಾಯದ ಪ್ರತಿನಿಧಿಗಳು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮೇಲೇರಿದರೂ, ಅದೇ ಸಮುದಾಯದ ಕಟ್ಟಕಡೆಯ ಜನರ ಬದುಕು ಇನ್ನೂ ಅಭದ್ರತೆಯಲ್ಲೇ ಸಿಲುಕಿದೆ. ಹಾಗಾಗಿ ಇದು ಮೀಸಲಾತಿಯ ಬಾಗಿಲು ತೆರೆದಿದ್ದರೂ ಅದರ ಒಳಗೆ ಯಾರು ಪ್ರವೇಶಿಸಿದರು, ಯಾರು ಹೊರಗೇ ಉಳಿದರು ಎಂಬುದನ್ನು ಕೇಳಬೇಕಾದ ಸಮಯ.
ಮಾಹಿತಿ ಕೃಪೆ: https://www.bhaskar.com/local/bihar/news/dalit-poverty-unemployment-reservation-review-demand-analysis-138965539.html





