ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ದೇವ (ದೇವನೇಶನ್ ಚೊಕ್ಕಲಿಂಗಂ) ಅವರು ನಿಧನರಾಗಿದ್ದಾರೆ. 75 ವರ್ಷದ ಅವರು ಹೃದಯಾಘಾತದಿಂದ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಕಳೆದ ಮೂರೂವರೆ ದಶಕಗಳಿಂದ ತಮ್ಮ ಸಂಗೀತದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ದೇವ, ಕನ್ನಡ ಚಿತ್ರರಂಗಕ್ಕೂ ಅನೇಕ ಜನಪ್ರಿಯ ಗೀತೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮೂಲತಃ ತಮಿಳುನಾಡಿನವರಾಗಿದ್ದರೂ ಕನ್ನಡ ಸಿನಿಮಾಗಳೊಂದಿಗೆ ಅವರು ವಿಶೇಷ ನಂಟು ಹೊಂದಿದ್ದರು.
ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ರಮೇಶ್ ಅರವಿಂದ್ ಹಾಗೂ ಉಪೇಂದ್ರ ಸೇರಿದಂತೆ ಕನ್ನಡದ ಪ್ರಮುಖ ನಟರ ಸಿನಿಮಾಗಳಿಗೆ ದೇವ ಸಂಗೀತ ಸಂಯೋಜಿಸಿದ್ದಾರೆ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಲವು ಹಾಡುಗಳು ಇಂದಿಗೂ ಸಂಗೀತಪ್ರಿಯರ ಮನಸ್ಸಿನಲ್ಲಿ ನೆಲೆಸಿವೆ. ‘ಅಮೃತವರ್ಷಿಣಿ’, ‘ಕೋಟಿಗೊಬ್ಬ’, ‘ಸೈನಿಕ’, ‘ಸಿಂಹಾದ್ರಿ ಸಿಂಹ’, ‘ರಾಜಾ ನರಸಿಂಹ’, ‘ಕದಂಬ’, ‘ವಿಷ್ಣು ಸೇನಾ’ ಮತ್ತು ‘ಒಲವೇ ಮಂದಾರ’ ಸೇರಿದಂತೆ ಹಲವು ಕನ್ನಡ ಚಿತ್ರಗಳ ಜನಪ್ರಿಯ ಹಾಡುಗಳ ಹಿಂದೆ ದೇವ ಅವರ ಸಂಗೀತದ ಕೊಡುಗೆ ಇದೆ.
‘ಅಮೃತವರ್ಷಿಣಿ’ ಚಿತ್ರದ ‘ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು’, ‘ಕದಂಬ’ ಚಿತ್ರದ ‘ಯಾಮಿನಿ ಯಾರಮ್ಮ ನೀನು ಯಾಮಿನಿ’, ಗಲಾಟೆ ಅಳಿಯಂದ್ರು ಸಿನಿಮಾದ ‘ತಿಲ್ಲಾನ ತಿಲ್ಲಾನ’, ‘ಸಾಗರಿಯೇ ಸಾಗರಿಯೇ’, ಸಿಂಹಾದ್ರಿಯ ಸಿಂಹದ ‘ಕಲ್ಲಾದರೆ ನಾನು’ ಮತ್ತು ‘ಮಲ್ನಾಡ್ ಅಡಿಕೆ’ ಮುಂತಾದ ಹಾಡುಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ 400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ದೇವ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಇದನ್ನೂ ಓದಿ: ಹಿರಿಯ ನಟ ನಾನಾ ಪಾಟೇಕರ್ ನಿಧನ
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಆರಂಭಿಕ ಸಂಗೀತ ಪಯಣದಲ್ಲಿಯೂ ದೇವ ಅವರ ಪಾತ್ರವಿತ್ತು ಎಂದು ಹೇಳಲಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ದೇವ, ಹಲವು ತಲೆಮಾರುಗಳ ಸಂಗೀತಪ್ರಿಯರಿಗೆ ನೆನಪಿನಲ್ಲಿ ಉಳಿಯುವ ಹಾಡುಗಳನ್ನು ನೀಡಿದ್ದಾರೆ.
ತಮ್ಮ ಸುಮಧುರ ಸಂಗೀತ ಸಂಯೋಜನೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಹಿರಿಯ ಸಂಗೀತ ನಿರ್ದೇಶಕರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.





