ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ ‘ಸರ್ಕಾರ ಬದಲಾವಣೆ’ಯ ಅರಾಜಕತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಹಿರಿಯ ರಾಜಕಾರಣಿ, ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ತಿರುಗೇಟು ನೀಡಿದ್ದು, “ಸರ್ಕಾರವನ್ನು ಕಾಂಗ್ರೆಸ್ ಬಯಸುತ್ತದೆಯೋ ಇಲ್ಲವೋ, ಆದರೆ ಈ ದೇಶದ ಜನತೆಯಂತೂ ‘ಸರ್ಕಾರ ಬದಲಾವಣೆ’ಯನ್ನು ಬಯಸುತ್ತಿದ್ದಾರೆ. ನಿಮ್ಮ ಸರ್ಕಾರದ ಅಧಿಕಾರಾವಧಿ ಮುಗಿದಿದ್ದು, ಈಗ ನೀವು ಅಧಿಕಾರದಿಂದ ನಿರ್ಗಮಿಸುವ ಸಮಯ ಬಂದಿದೆ” ಎಂದು ಗುಡುಗಿದ್ದಾರೆ.
ಲಕ್ನೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಜ್ನಾಥ್ ಸಿಂಗ್, “ದೇಶದ ಯುವಕರ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸುವ ಬದಲು, ರಾಜಕೀಯ ಸಂಘರ್ಷ ಮತ್ತು ಅರಾಜಕತೆಯನ್ನು ಹಬ್ಬಿಸಲು ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ. ಪ್ರಜಾಪ್ರಭುತ್ವವು ಯಾರಿಗೂ ಸಹ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಅಥವಾ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಬುಡಮೇಲು ಮಾಡಲು ಪರವಾನಗಿ ನೀಡುವುದಿಲ್ಲ” ಎಂದು ಹೇಳಿದ್ದರು.
ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಪಿಲ್ ಸಿಬಲ್, “ಕಾಂಗ್ರೆಸ್ ಬಾಂಗ್ಲಾದೇಶದ ಹಾದಿಯಲ್ಲಿ ಸರ್ಕಾರ ಬದಲಾವಣೆ ಬಯಸುತ್ತಿದೆ ಎಂಬ ನಿಮ್ಮ ಆರೋಪ ಸರಿಯಲ್ಲ. ಆದರೆ, ದೇಶದ ಜನತೆಯೇ ಇಂದು ಆಡಳಿತ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸ್ಪಷ್ಟ” ಎಂದು ತಿರುಗೇಟು ನೀಡಿದ್ದಾರೆ.
“ಒಂದು ಕಾಲದಲ್ಲಿ ‘ಭ್ರಷ್ಟಾಚಾರದ ವಿರುದ್ಧ ಭಾರತ’ (India Against Corruption) ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಗಳೇ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದವು. ಆದರೆ, ಅಧಿಕಾರಕ್ಕೆ ಬಂದ ಮೇಲೆ ನೀವೇ ಭ್ರಷ್ಟಾಚಾರಕ್ಕೆ ಮಣೆ ಹಾಕಿದ್ದೀರಿ, ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದ್ದೀರಿ ಹಾಗೂ ಮತದಾರರ ಪಟ್ಟಿ ಮೇಲೆ ದಾಳಿ ಎಸಗಿದ್ದೀರಿ. ನೀವು ಹೊರಡುವ ಸಮಯ ಬಂದಿದೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.




