ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದು ಆರು ತಿಂಗಳು ಕಳೆದರೂ ಕೂಡಾ ಸಂತ್ರಸ್ತೆಯ ಪೋಷಕರಿಗೆ ಇನ್ನೂ ಕೂಡಾ ಆಕೆಯ ಮರಣ ಪ್ರಮಾಣಪತ್ರದ ಪ್ರತಿ ಲಭಿಸಿಲ್ಲ ಎಂದು ವರದಿಯಾಗಿದೆ.
ಕಳೆದ ವರ್ಷ ಆಗಸ್ಟ್ 9ರಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಆವರಣದಲ್ಲಿರುವ ಸೆಮಿನಾರ್ ಹಾಲ್‌ನಲ್ಲಿ ಸಂತ್ರಸ್ತೆಯ ಶವ ಪತ್ತೆಯಾಗಿದೆ. ಆದರೆ ಈವರೆಗೂ ಕುಟುಂಬಕ್ಕೆ ಮರಣ ಪ್ರಮಾಣಪತ್ರ ಲಭಿಸಿಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಆರ್‌ಜಿ ಕರ್ ಅತ್ಯಾಚಾರ ಪ್ರಕರಣ: ಆರೋಪಿಗೆ ಮರಣ ದಂಡನೆ ಶಿಕ್ಷೆ ಕೋರಿ ಹೈಕೋರ್ಟ್‌ಗೆ ಪಶ್ಚಿಮ ಬಂಗಾಳ ಸರ್ಕಾರ ಅರ್ಜಿ
ಆರ್‌ಜಿ ಕರ್ ಮತ್ತು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಅಧಿಕಾರಿಗಳು ಪರಸ್ಪರ ಜವಾಬ್ದಾರಿಯನ್ನು ವರ್ಗಾಯಿಸುತ್ತಿರುವುದರಿಂದ ಇಲ್ಲಿಯವರೆಗೆ ಮರಣ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದಾರೆ.
ಸಾವು ನಡೆದ ಸ್ಥಳ ಆರ್‌ಜಿ ಕರ್ ಆಗಿರುವುದರಿಂದ, ಮರಣ ಪ್ರಮಾಣಪತ್ರವನ್ನು ಒದಗಿಸುವುದು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಕೆಎಂಸಿ ಅಧಿಕಾರಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆ ಆವರಣದೊಳಗೆ ರೋಗಿ ಸತ್ತರೆ ಮರಣ ಪ್ರಮಾಣಪತ್ರವನ್ನು ಕೆಎಂಸಿ ಅಧಿಕಾರಿಗಳು ಒದಗಿಸಬೇಕಾಗುತ್ತದೆ ಎಂದು ಆರ್‌ಜಿ ಕರ್ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಆರ್‌ಜಿ ಕರ್ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ಪ್ರಕಟ
ಆರ್‌ಜಿ ಕರ್‌ಗೆ ಲಗತ್ತಿಸಲಾದ ವೈದ್ಯಕೀಯ ಅಧಿಕಾರಿಯ ಹೇಳಿಕೆಯ ಪ್ರಕಾರ, ಮರಣ ಪ್ರಮಾಣಪತ್ರದ ಪ್ರತಿಯನ್ನು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯದ ದಾಖಲೆಗಳಲ್ಲಿ ಮರಣ ಪ್ರಮಾಣಪತ್ರವನ್ನು ಉಲ್ಲೇಖಿಸಿದ್ದರೆ, ನಮಗೆ ಈವರೆಗೂ ಯಾಕೆ ನೀಡಲಾಗಿಲ್ಲ ಎಂದು ಸಂತ್ರಸ್ತೆಯ ಪೋಷಕರು ಪ್ರಶ್ನಿಸಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ಅವರನ್ನು ಅಪರಾಧಿ ಎಂದು ಕೋಲ್ಕತ್ತಾದ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಫೆಬ್ರವರಿ 24ರಂದು ಈ ಪ್ರಕರಣದ ತನಿಖೆಯ ಕುರಿತು ಹೊಸ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಸೂಚಿಸಿದೆ.
ವಿಶೇಷ ನ್ಯಾಯಾಲಯವು ಈಗಾಗಲೇ ಅತ್ಯಾಚಾರ ಮತ್ತು ಕೊಲೆಯ ಪ್ರಮುಖ ಅಪರಾಧಿಗೆ ಶಿಕ್ಷೆಯನ್ನು ಘೋಷಿಸಿದೆ.
