ಐಪಿಎಲ್‌ನ 18ನೇ ಟೂರ್ನಿ ಇಂದಿನಿಂದ (ಮಾರ್ಚ್ 22) ಆರಂಭವಾಗುತ್ತಿದೆ. ಟೂರ್ನಿಯ ಮೊದಲ ಪಂದ್ಯ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಇದೇ ಸಮಯದಲ್ಲಿ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿಗರು ಯಾರು ಎಂಬ ಕುತೂಹಲಕಾರಿ ಚರ್ಚೆಗಳು ನಡೆಯುತ್ತಿವೆ. ಐಪಿಎಲ್‌ನಲ್ಲಿ ಹೆಚ್ಚು ಸಭಾವನೆ ಪಡೆಯುವ ಭಾರತೀಯ ಆಟಗಾರರಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಅಂತೆಯೇ ವಿದೇಶ ಆಟಗಾರರಲ್ಲಿ ಸುನಿಲ್ ನರೈನ್ ಮೊದಲ ಸ್ಥಾನದಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ರೋಹಿತ್ ಶರ್ಮಾ ಐಪಿಎಲ್‌ನ 17 ಟೂರ್ನಿಗಳಲ್ಲಿ ಬರೋಬ್ಬರಿ 210.90 ಕೋಟಿ ರೂ. ಆದಾಯ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ಆದಾಯ ಪಡೆದ ಭಾರತೀಯ ಕ್ರಿಕೆಟಿಗರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಅವರು ಈವರೆಗೆ 209.20 ಕೋಟಿ ರೂ. ಆದಾಯ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಎಂ.ಎಸ್ ಧೋನಿ 192.84 ಕೋಟಿ ರೂ., ನಾಲ್ಕನೇ ಸ್ಥಾನದಲ್ಲಿ ರವೀಂದ್ರ ಜಡೇಜಾ 143.01 ಕೋಟಿ ರೂ. ಹಾಗೂ ಐದನೇ ಸ್ಥಾನದಲ್ಲಿ ಕೆಎಲ್ ರಾಹುಲ್ 113.10 ಕೋಟಿ ರೂ. ಇದ್ದಾರೆ.
ಅಂತೆಯೇ, ಹೆಚ್ಚು ಆದಾಯ ಗಳಿಸಿದ ವಿದೇಶಿ ಆಟಗಾರರಲ್ಲಿ ಸುನಿಲ್ ನರೈನ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಐಪಿಎಲ್ ಲೀಗ್‌ಗಳಲ್ಲಿ ಈವರೆಗೆ 125.25 ಕೋಟಿ ರೂ. ಗಳಿಸಿದ್ದಾರೆ. 2ನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ 102.00 ಕೋಟಿ ರೂ., ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ 100.62 ಕೋಟಿ ರೂ. ನಾಲ್ಕನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ 89.75 ಕೋಟಿ ರೂ. ಹಾಗೂ 80.53 ಕೋಟಿ ರೂ.ಗಳಿಸಿರುವ ಕೀರನ್ ಪೊಲಾರ್ಡ್ ಐದನೇ ಸ್ಥಾನದಲ್ಲಿದ್ದಾರೆ.