ಮೋದಿ ಮಡಿಲಲ್ಲಿ ಆಡುವ ‘ಗೋದಿ ಮೀಡಿಯಾ’ ತಮ್ಮ ಸ್ಟುಡಿಯೋಗಳಲ್ಲಿ ಮುಸ್ಲಿಂ ದ್ವೇಷದ ವಿಡಿಯೋಗಳನ್ನು ಹೇಗೆ ತಯಾರಿಸುತ್ತಾರೆಂದು ರಾಜ್ಯಸಭಾದ ಮಾಜಿ ಸದಸ್ಯ ಮತ್ತು ಆರೆಸ್ಸೆಸ್ ಮುಂದಾಳು ಪ್ರೊ. ರಾಕೇಶ್ ಸಿನ್ಹಾ ಬಹಿರಂಗಪಡಿಸಿದ್ದಾರೆ.
ಅವರ ಭಾಷಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಟೀವಿ ಚರ್ಚೆಯಲ್ಲಿ ಮುಸಲ್ಮಾನರ ಗಡ್ಡ ಮತ್ತು ಟೋಪಿ ಕುರಿತು ಬೈಗುಳದ ಭಾಷೆ ಬಳಸುವಂತೆ ರಾಷ್ಟ್ರಮಟ್ಟದ ಟೀವಿ ಚಾನೆಲ್ಲೊಂದರ ಆ್ಯಂಕರ್ ಮುಂಚಿತವಾಗಿಯೇ ತಮಗೆ ಸೂಚಿಸಿದ್ದಾಗಿಯೂ, ಎಂತೆಂತಹ ಬೈಗುಳಗಳನ್ನು ಬಳಸಬಹುದು ಎಂಬುದನ್ನು ಹೇಳಿಕೊಟ್ಟಿದ್ದಾಗಿ ಪ್ರೊ. ಸಿನ್ಹಾ ಬಯಲು ಮಾಡಿದ್ದಾರೆ.
‘ಇಂದಿನ ಭಾರತದಲ್ಲಿ ಮುಸಲ್ಮಾನರ ಭವಿಷ್ಯತ್ತು’ ಕುರಿತು ನಯೀ ದುನಿಯಾ ನ್ಯಾಷನಲ್ ಫೋರಮ್ ಇದೇ ಜನವರಿ 16ರಂದು ಏರ್ಪಡಿಸಿದ್ದ ವಿಚಾರಸಂಕಿರಣದ ಸಂದರ್ಭ. ಕಾಂಗ್ರೆಸ್ಸಿನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ರಾಷ್ಟ್ರೀಯ ಜನತಾದಳದ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಪ್ರೊ. ಮನೋಜ್ ಝಾ ಹಾಗೂ ನಯೀ ದುನಿಯಾ ಪತ್ರಿಕೆಯ ಸಂಪಾದಕ ಶಾಹಿದ್ ಸಿದ್ದೀಖಿ ಕೂಡ ಈ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ಆ್ಯಂಕರ್ ಮತ್ತು ತಮ್ಮ ನಡುವೆ ನಡೆದ ಮಾತುಕತೆಯನ್ನು ಪ್ರೊ. ಸಿನ್ಹಾ ಸಭೆಯ ಮುಂದೆ ಪ್ರಸ್ತಾಪಿಸಿದರು.
ಪ್ರೊ. ಸಿನ್ಹಾ: ‘ರಾಷ್ಟ್ರ ಮಟ್ಟದ ಟೀವಿ ಚಾನೆಲ್ಲೊಂದರಿಂದ ನನಗೆ ಫೋನ್ ಬಂದಿತ್ತು. ಆ ಚಾನೆಲ್‌ನ ಹೆಸರು ಹೇಳೋದು ಸರಿಯಲ್ಲ. ಆ ವೇಳೆ ನಾನು ದಿಲ್ಲಿಯ ರತನ್ ಟಾಟಾ ಲೈಬ್ರರಿಯಲ್ಲಿದ್ದೆ. ‘ಇಂದಿನ ಚರ್ಚೆಯನ್ನು ನಿಮ್ಮ ಹೇಳಿಕೆಯಿಂದ ಶುರು ಮಾಡ್ತೀನಿ’ ಅಂತ ಆ್ಯಂಕರ್ ತಿಳಿಸಿದ. ನನಗೆ ಖುಷಿಯೆನಿಸಿತು’.
ಆ್ಯಂಕರ್: ‘ಚರ್ಚೆಗೆ ನನ್ನ ಮಿತ್ರರೊಬ್ಬರು ಬರ್ತಿದ್ದಾರೆ. ಏನು ಮಾತಾಡಬೇಕೆಂದು ಅವರಿಗೂ ಹೇಳಿದ್ದೇನೆ. ನೀವು ಉಗ್ರರಾಗಿ ಮಾತಾಡಬೇಕು, ಶಾಂತರಾಗಿರ್ತೀರಿ. ಚೆನ್ನಾಗಿ ಕಾಣಲ್ಲ’.
ಪ್ರೊ. ಸಿನ್ಹಾ: ಹೇಗ ಮತ್ತು ಏನನ್ನು ಹೇಳಬೇಕೆಂದು ಹೇಳಿ, ಹಾಗೇ ಹೇಳ್ತೀನಿ ಅಂದೆ.(ದಾಡಿ ಮತ್ತು ಟೋಪಿಯ ಕುರಿತು ಕೆಲ ಬೈಗುಳ ಮತ್ತು ಬರ್ಬರ ಪದಗಳನ್ನು ಬಳಸುವಂತೆ ಆತನ ನನಗೆ ಸೂಚಿಸಿದ). ಸರಿ, ಖಂಡಿತ ಹೇಳ್ತೀನಿ. ಇನ್ನೂ ಏನಾದ್ರೂ ಇದ್ರೆ ಹೇಳಿಬಿಡಿ ಅಂದೆ. ಇದು ಸಾಲದು ಇನ್ನಷ್ಟು ಹೇಳಿಕೊಡಿ ಅಂದೆ ಕೂಡ. ಸರ್, ನೀವು ಏನು ಬೇಕಾದರೂ ಹೇಳಿ ಸರ್. ನೀವಿಬ್ರೂ ಜಗಳ ಆಡಬೇಕು. ನಾನು ಮಧ್ಯಪ್ರವೇಶಿಸಿ ಜಗಳ ಬಿಡಿಸುವಂತೆ ನಟಿಸುತ್ತೇನೆ. ಚರ್ಚೆ ಹಿಟ್ ಆಗುತ್ತೆ. ನೀವೂ ಟ್ರೆಂಡಿಂಗ್ ಮಾಡಿ ನಾನೂ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಮಾಡ್ತೀನಿ ಅಂದ.
RSS leader Rakesh Sinha said he was tutored by anchor from news channel to make derogatory remarks on beard and skull-cap of Muslims during debate to go trending on Twitter. Another panelist Ansar Raza was also asked to make problematic remarks to stage a quarrel between them. pic.twitter.com/SJIVVj4mk0
— Waquar Hasan (@WaqarHasan1231) January 17, 2025
ಪ್ರೊ. ಸಿನ್ಹಾ: ಇದಾದ ನಂತರ ಟೀವಿ ಚಾನೆಲ್ ವಾಹನ ಬಂತು. ನನಗೆ ತುರ್ತು ಕೆಲಸವೊಂದರ ಮೇಲೆ ಮುಂಬಯಿಗೆ ಹೋಗಬೇಕಾಗಿದೆ. ಚರ್ಚೆಗೆ ಬರೋಕಾಗಲ್ಲ ಅಂತ ಹೇಳಿದೆ. ಏನಾಯ್ತು ಸರ್ ಅಂತ ಆತ ಕೇಳಿದ. ನೀವು ಏನೇನು ಹೇಳಬೇಕೆಂದು ಸೂಚನೆ ನೀಡಿದ ನಂತರ ನಾನು ಬಾತ್ ರೂಮ್ ಗೆ ಹೋಗಿ ಹಲವಾರು ಸಲ ರಿಹರ್ಸಲ್ ಮಾಡಿದೆ, ಮಾಡುತ್ತ ಮಾಡುತ್ತ ನನ್ನ ಮುಖವನ್ನು ಕನ್ನಡಿಯಲ್ಲಿ ಗಮನಿಸಿ ನೋಡಿದೆ. ನಾನು ಸಾಕಷ್ಟು ಎತ್ತರದ ಆಳು, ನೋಡಲೂ ಲಕ್ಷಣವಾಗಿದ್ದೇನೆ ಅನಿಸಿತು. ಇಷ್ಟೆಲ್ಲ ಇದ್ದಮೇಲೆ ಮುಂಬಯಿಗೆ ಹೋಗಿ ಚಲನಚಿತ್ರಗಳಲ್ಲಿ ಯಾಕೆ ನಟಿಸಬಾರದು ಅನಿಸಿದೆ ಅಂದೆ.
‘2016ರಲ್ಲಿ ನಡೆದ ಮಾತುಕತೆಯಿದು. ಈ ದೇಶದಲ್ಲಿ ಯಾರದಾದರೂ ಗಡ್ಡ ಎಳೆದಾಡಲು ಅಥವಾ ಟೋಪಿಯನ್ನು ಕಿತ್ತು ಹಾಕಲು ಹುಟ್ಟಿಲ್ಲ ನಾನು. ಹಾಗೆ ಟೋಪಿ ಎಳೆದು ಹಾಕುವವರ ವಿರುದ್ಧ ಹೋರಾಡಲು ಹುಟ್ಟಿದ್ದೇನೆ. ಆರೆಸ್ಸೆಸ್ ಸ್ವಯಂಸೇವಕ ನಾನು. ನನ್ನ ಜವಾಬ್ದಾರಿ ಏನೆಂದು ಚೆನ್ನಾಗಿ ಬಲ್ಲೆ’ ಎಂದೂ ಸಿನ್ಹಾ ಅವರು ಸಭೆಯಲ್ಲಿ ತಮ್ಮ ಮಾತು ಮುಂದುವರೆಸಿ ಹೇಳಿರುವುದು ವಿಡಿಯೋದಲ್ಲಿದೆ.
ಈ ವರದಿ ಓದಿದ್ದೀರಾ?: ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?
ವಿಚಿತ್ರವೆಂದರೆ ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಟ್ರೋಲ್ ಸೇನೆ ಇಂತಹುದೇ ಭಾಷೆ ಮತ್ತು ಬೈಗುಳಗಳನ್ನು ಬಹಳ ವರ್ಷಗಳಿಂದ ಬಳಸುತ್ತ ಬಂದಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಕುಂವರ್ ದಾನಿಶ್ ಅಲಿ ಎಂಬ ಸಂಸದರನ್ನು ‘ಶಿಶ್ನದ ಮುಂದೊಗಲು ಕತ್ತರಿಸಿಕೊಂಡವನೇ, ತಲೆಹಿಡುಕನೇ, ಭಯೋತ್ಪಾದಕನೇ, ನಿನ್ನನ್ನು ಹೊರಗೆ ನೋಡಿಕೊಳ್ತೀನಲೋ ಮುಲ್ಲಾ…..’ ಎಂದೆಲ್ಲ ಬೈದಿದ್ದರು. ಉತ್ತರಪ್ರದೇಶದ ಯತಿ ನರಸಿಂಹಾನಂದ ಎಂಬುವರು ಬಾರಿ ಬಾರಿಗೆ ಮುಸಲ್ಮಾನರ ವಿರುದ್ಧ ಅವಾಚ್ಯ ಪದಗಳನ್ನು ಬಳಸುತ್ತಿರುತ್ತಾರೆ. ಪ್ರಧಾನಿ ಮೋದಿ ಅವರೇ ಮುಸಲ್ಮಾನರನ್ನು ಹೆಚ್ಚು ಮಕ್ಕಳ ಹುಟ್ಟಿಸುವವರು ಮುಂತಾಗಿ ಬೈದಿದ್ದಾರೆ, ಮುಸ್ಲಿಮರ ವಿರುದ್ಧ ಯೋಗಿ ಆದಿತ್ಯನಾಥ್ ಅವರ ಕುಖ್ಯಾತ ಹೇಳಿಕೆಗಳು ಉಲ್ಲೇಖಗಳು ಈಗಲೂ ಲಭ್ಯ. ಇಂತಹ ಯಾವುದೇ ಹೇಳಿಕೆಗಳನ್ನು ಪ್ರೊ.ಸಿನ್ಹಾ ಪ್ರಸ್ತಾಪಿಸಿಲ್ಲ.
ಸಿನ್ಹಾ ಅವರು ರಾಜ್ಯಸಭೆ ಸದಸ್ಯರಾಗುವ ಸಲುವಾಗಿ ವರ್ಷಗಟ್ಟಲೆ ಮುಸ್ಲಿಮ್ ನಿಂದನೆ ಮಾಡಿರುವುದು ವಾಸ್ತವ ಎಂಬ ಪ್ರತಿಕ್ರಿಯೆಗಳೂ ಸಿನ್ಹಾ ಅವರ ಈ ವಿಡಿಯೋ ಸಂಬಂಧದಲ್ಲಿ ವ್ಯಕ್ತವಾಗಿವೆ..
ಗುಲಾಮ ಗುಲಾಮ ಮಾಧ್ಯಮ ಇದಂತೂ ಎಡಚಾರ ಮಾಧ್ಯಮಇಂತಹ news ಸಾಧ್ಯ, ಮೋದಿ RSS ವಿರುದ್ದ ಬರೆಯುವ ಇವುಗಳಿಗೆ ದೇಶದ ಬಗ್ಗೆ ಯಾವ ಕಾಳಜಿ ಇಲ್ಲ
ಪತ್ರಿಕೋದ್ಯಮದ ಧರ್ಮವನ್ನು ಎತ್ತಿಹಿಡಿಯುವ ‘ಈ ದಿನ’ ಮಾಧ್ಯಮಕ್ಕೆ ಕೋಟಿ ಕೋಟಿ ನಮನ!