ಉದ್ಯೋಗ ಮತ್ತು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಕೊಡಿಸುವ ನೆಪದಲ್ಲಿ ರಷ್ಯಾ ಮೂಲದ ಇಬ್ಬರು ಏಜೆಂಟ್‌ಗಳು ಭಾರತೀಯರನ್ನು ಕಳ್ಳಸಾಗಣೆ ಮಾಡಿದ್ದಾರೆ. ಅಲ್ಲದೆ, ಅವರನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಸೇನೆಗೆ ದೂಡಿದ್ದಾರೆ ಎಂದು ಸಿಬಿಐ ಹೇಳಿದೆ.
ರಷ್ಯಾದ ಮಾನವ ಕಳ್ಳ ಸಾಗಾಣಿಕೆ ಜಾಲವನ್ನು ಗುರುವಾರ ಸಿಬಿಐ ಭೇದಿಸಿದೆ. “ಆರೋಪಿ ಏಜೆಂಟ್‌ಗಳು ರಷ್ಯಾಕ್ಕೆ ತೆರಳುವ ಭಾರತೀಯರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ, ಅವರನ್ನು ರಷ್ಯಾದ ಸಶಸ್ತ್ರ ಪಡೆಗಳೊಂದಿಗೆ ಸೇರುವಂತೆ ಒತ್ತಾಯಿಸಿದ್ದಾರೆ” ಎಂದು ಹೇಳಿದೆ.
“ರಾಜಸ್ಥಾನದ ನಿವಾಸಿ ಕ್ರಿಸ್ಟಿನಾ ಮತ್ತು ಮೊಯಿನುದ್ದೀನ್ ಚಿಪ್ಪಾ ಅವರು ರಷ್ಯಾದಲ್ಲಿ ನೆಲೆಸಿದ್ದಾರೆ. ಅವರು, ರಷ್ಯಾದಲ್ಲಿ ಲಾಭದಾಯಕ ಉದ್ಯೋಗಗಳನ್ನು ಕೊಡಿಸುವ ಆಮಿಷವೊಡ್ಡಿ, ಭಾರತೀಯ ಯುವಕರನ್ನು ರಷ್ಯಾಕ್ಕೆ ಸಾಗಿಸಲು ನೆರವು ನೀಡುತ್ತಿದ್ದರು” ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಈ ಇಬ್ಬರು ಆರೋಪಿಗಳು ಸೇರಿದಂತೆ 17 ವೀಸಾ ಸಲಹಾ ಕಂಪನಿಗಳು, ಅವುಗಳ ಮಾಲೀಕರು ಹಾಗೂ ಭಾರತದಾದ್ಯಂತ ಇರುವ ಏಜೆಂಟ್‌ಗಳನ್ನು ಎಫ್‌ಐಆರ್‌ನಲ್ಲಿ ಸಿಬಿಐ ಪಟ್ಟಿ ಮಾಡಿದೆ. ಎಲ್ಲರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ತಮ್ಮ ಏಜೆಂಟರ ಮೂಲಕ ರಷ್ಯಾದಲ್ಲಿ ಸೆಕ್ಯೂರಿಟಿ ಗಾರ್ಡ್, ಸಹಾಯಕರು ಸೇರಿದಂತೆ ನಾನಾ ರೀತಿಯ ಉದ್ಯೋಗ ಮತ್ತು ಶಿಕ್ಷಣಕ್ಕೆ ಪ್ರವೇಶಾತಿ ನೆಪದಲ್ಲಿ ಭಾರತೀಯರನ್ನು ರಷ್ಯಾಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ರಿಯಾಯತಿ ಶುಲ್ಕಗಳು ಮತ್ತು ವೀಸಾ ವಿಸ್ತರಣೆಗಳನ್ನು ನೀಡುವ ಮೂಲಕ ಸರ್ಕಾರಿ ಅಥವಾ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಬದಲಾಗಿ ರಷ್ಯಾದಲ್ಲಿರುವ ಸಂಶಯಾಸ್ಪದ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಏಜೆಂಟರು ವಿದ್ಯಾರ್ಥಿಗಳನ್ನು ವಂಚಿಸಿದ್ದಾರೆ. ಅವರನ್ನು ನಂಬಿ ಯುವಕರು ರಷ್ಯಾಕ್ಕೆ ತೆರಳಿದ ನಂತರ, ಅವರ ಪಾಸ್‌ಪೋರ್ಟ್‌ಗಳನ್ನು ಅಲ್ಲಿನ ಏಜೆಂಟರು ವಶಪಡಿಸಿಕೊಳ್ಳುತ್ತಾರೆ. ಯುದ್ಧದ ತರಬೇತಿ ನೀಡಿ, ಸಶಸ್ತ್ರ ಪಡೆಗಳಿಗೆ ಸೇರಲು ಒತ್ತಾಯಿಸುತ್ತಾರೆ ಎಂದು ಸಿಬಿಐ ಹೇಳಿದೆ.
“ಏಜೆಂಟ್‌ಗಳು ಹಲವು ಭಾರತೀಯ ಯುವಕರಿಗೆ ಯುದ್ಧದ ತರಬೇತಿ ನೀಡಿ, ಅವರ ಇಚ್ಛೆಗೆ ವಿರುದ್ಧವಾಗಿ ರಷ್ಯಾ ಸೇನೆಗೆ ಸೇರಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಪ್ರದೇಶಗಳಲ್ಲಿ ನಿಯೋಜನೆ ಮಾಡಿದ್ದಾರೆ. ಅವರ ಜೀವವನ್ನು ಗಂಭೀರ ಅಪಾಯದಲ್ಲಿ ಇರಿಸಿದ್ದಾರೆ” ಎಂದು ಸಿಬಿಐ ಹೇಳಿದೆ.
ಕೇಂದ್ರೀಯ ತನಿಖಾ ದಳ ಗುರುವಾರ ಕಳ್ಳಸಾಗಾಣಿಕೆ ಜಾಲವನ್ನು ಭೇದಿಸಿತ್ತು. ಸುಳ್ಳು ಆಮಿಷಗಳ ಮೂಲಕ ರಷ್ಯಾಕ್ಕೆ ಭಾರತೀಯರನ್ನು ಕರೆದೊಯ್ದಿರುವ 35 ನಿದರ್ಶನಗಳನ್ನು ಸಿಬಿಐ ಪತ್ತೆ ಮಾಡಿದೆ.
ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ದೆಹಲಿಯ 24×7 ಆರ್‌ಎಎಸ್ ಸಾಗರೋತ್ತರ ಫೌಂಡೇಶನ್ ಮತ್ತು ಅದರ ನಿರ್ದೇಶಕ ಸುಯಶ್ ಮುಕುತ್, ಮುಂಬೈನ ಒ ಎಸ್‌ಡಿ ಬ್ರೋಸ್ ಟ್ರಾವೆಲ್ಸ್ ಅಂಡ್ ವೀಸಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ರಾಕೇಶ್ ಪಾಂಡೆ, ಚಂಡೀಗಢದಲ್ಲಿ ಬಾಬಾ ವ್ಲಾಗ್ಸ್ ಮತ್ತು ಅದರ ನಿರ್ದೇಶಕ ಮಂಜೀತ್ ಸಿಂಗ್ ಎಂಬ ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ. ಅಲ್ಲದೆ, ದುಬೈನಲ್ಲಿರುವ ಓವರ್‌ಸೀಸ್ ರಿಕ್ರೂಟ್‌ಮೆಂಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ಫೈಸಲ್ ಅಬ್ದುಲ್ ಮುತಾಲಿಬ್ ಖಾನ್ ಅಲಿಯಾಸ್ ಬಾಬಾ ಎಂಬಾತನನ್ನೂ ಆರೋಪಿಯನ್ನು ಸೇರಿಸಿದೆ.
“ಇದುವರೆಗೆ 50 ಲಕ್ಷ ರೂ.ಗೂ ಅಧಿಕ ನಗದು, ದಾಖಲೆಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಡೆಸ್ಕ್‌ಟಾಪ್‌ಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳಂತಹ ಎಲೆಕ್ಟ್ರಾನಿಕ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಡುಕಾಟಗಳು ನಡೆಯುತ್ತಿವೆ. ಕೆಲವು ಶಂಕಿತರನ್ನು ವಿವಿಧ ಸ್ಥಳಗಳಲ್ಲಿ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಎಂದು ಸಿಬಿಐ ತಿಳಿಸಿದೆ.
“ಉಕ್ರೇನ್-ರಷ್ಯಾ ಯುದ್ಧ ಪ್ರದೇಶಕ್ಕೆ ದೂಡಲ್ಪಟ್ಟಿರುವ ಹಲವಾರು ಸಂತ್ರಸ್ತ ಭಾರತೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ಸಿಬಿಐ ಹೇಳಿದೆ.