ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಹಾಗೂ ಸಾರ್ವಜನಿಕರ ದಾರಿ ತಪ್ಪಿಸುವಂತಹ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಖ್ಯಾತ ಲೇಖಕಿ ಮಧು ಕಿಶ್ವರ್ ಅವರ ವಿರುದ್ಧ ಚಂಡೀಗಢ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಇಂದು ಚಂಡೀಗಢ ಪೊಲೀಸರ ತಂಡವೊಂದು ನವದೆಹಲಿಯಲ್ಲಿರುವ ಮಧು ಕಿಶ್ವರ್ ಅವರ ಕಚೇರಿಗೆ ಭೇಟಿ ನೀಡಿದೆ.
ಚಂಡೀಗಢದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಏಪ್ರಿಲ್ 21 ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್‌ಎಸ್(ಭಾರತೀಯ ನ್ಯಾಯ ಸಂಹಿತೆ) ವಿವಿಧ ಸೆಕ್ಷನ್‌ಗಳಾದ 196(ಧರ್ಮ, ಜನಾಂಗ, ಭಾಷೆಯ ಆಧಾರದ ಮೇಲೆ ದ್ವೇಷ ಬಿತ್ತುವುದು), 336 (1) (ನಕಲಿ ದಾಖಲೆ ಸೃಷ್ಟಿ) ಮತ್ತು 356 (ಕ್ರಿಮಿನಲ್ ಮಾನನಷ್ಟ) ಅಡಿಯಲ್ಲಿ ದೂರು ದಾಖಲಾಗಿದೆ. ಇದರ ಜೊತೆಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 C, D ಮತ್ತು 67 ರ ಅಡಿಯಲ್ಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೋಮವಾರ (ಏಪ್ರಿಲ್ 20) ತಡರಾತ್ರಿ ತಮ್ಮ ಕಚೇರಿಗೆ ಪೊಲೀಸ್ ತಂಡ ಭೇಟಿ ನೀಡಿದ್ದರ ಕುರಿತು ಮಧು ಕಿಶ್ವರ್ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ” ಕಾನೂನಿನ ಪ್ರಕಾರ ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೂ ಮುನ್ನ ಮಹಿಳೆಯರನ್ನು ವಿಚಾರಣೆಗೆ ಭೇಟಿ ಮಾಡಲು ಅಥವಾ ಬಂಧಿಸಲು ಪೊಲೀಸರಿಗೆ ಅನುಮತಿಯಿಲ್ಲ. ಹೀಗಾಗಿ ರಾತ್ರಿ ಬಂದಿದ್ದ ತಂಡದ ಮುಖ್ಯಸ್ಥರೊಂದಿಗೆ ನಾನು ಫೋನ್‌ನಲ್ಲಿ ಮಾತನಾಡಿದೆ. ಚಂಡೀಗಢದಲ್ಲಿ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಕುರಿತು ನೋಟಿಸ್ ನೀಡಲು ಬಂದಿರುವುದಾಗಿ ಅವರು ತಿಳಿಸಿದರು. ನಾನು ಅವರಿಗೆ ಕಟ್ಟುನಿಟ್ಟಾಗಿ ಕಾನೂನು ಪಾಲಿಸುವಂತೆ ಹಾಗೂ ಬೆಳಿಗ್ಗೆ ಬರುವಂತೆ ಹೇಳಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕೊಂದರಲ್ಲಿ ಅಶ್ಲೀಲ ಪದಗಳನ್ನು ಬಳಸಿ, ವಿಡಿಯೋದಲ್ಲಿರುವ ವ್ಯಕ್ತಿಯನ್ನು ಬೇರೆಯವರೇ ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಘನತೆಗೆ ಕುಂದು ತರುವ ಮತ್ತು ಸಾರ್ವಜನಿಕ ಶಾಂತಿ ಕದಡುವ ಉದ್ದೇಶದಿಂದಲೇ ಈ ನಕಲಿ ಎಲೆಕ್ಟ್ರಾನಿಕ್ ದಾಖಲೆಯನ್ನು ಸೃಷ್ಟಿಸಿ ಹಂಚಲಾಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ಪಾಡ್‌ಕಾಸ್ಟ್ ಒಂದರ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೆಲವು ಮಹಿಳೆಯರು ಸಂಸದರಾಗಬೇಕಿದ್ದರೆ ಮೋದಿಯವರೊಂದಿಗೆ ಮಲಗಬೇಕಿತ್ತು ಎಂದು ಆರೋಪಿಸಿದ್ದರು. ಆ ನಂತರ ಲೇಖಕಿ ಮಧು ಕಿಶ್ವರ್ ಅವರು ಮೋದಿಯವರ ವಿರುದ್ಧ ಹಲವು ಗಂಭೀರ ಆರೋಪ ಮಾಡಿದ್ದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಲ್ಲದೇ, ವಿಡಿಯೋಗಳ ಮೂಲಕ ಆರೋಪ ಮಾಡುತ್ತಾ ಬಂದಿದ್ದಾರೆ. ಆದರೆ, ಮೋದಿ ಸಂಪುಟದ ಮಂತ್ರಿಗಳು, ಬಿಜೆಪಿಯ ಪ್ರಮುಖ ನಾಯಕರು ಅಥವಾ ಆರೆಸ್ಸೆಸ್‌ನ ಮುಖಂಡರು ಈ ಬಗ್ಗೆ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈಗ ಅನಾಮಿಕ ವ್ಯಕ್ತಿಯೊಬ್ಬರ ದೂರಿನ ಮೇಲೆ ಎಫ್‌ಐಆರ್ ಮಾಡಲಾಗಿದೆ.





