ಸಲಿಂಗ ವಿವಾಹ ಪ್ರಕರಣದ ಅರ್ಜಿದಾರರು ತಮ್ಮ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯದಲ್ಲಿ ಬಹಿರಂಗವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದ್ದಾರೆ. ಆದಾಗ್ಯೂ, ಮರುಪರಿಶೀಲನಾ ಅರ್ಜಿಗಳನ್ನು ಚೇಂಬರ್ ವಿಚಾರಣೆಗಳಲ್ಲಿ ನಿರ್ಧರಿಸಲಾಗುತ್ತದೆ ಮತ್ತು ಸಾಂವಿಧಾನಿಕ ಪೀಠವು ಅರ್ಜಿಗಳ ಅರ್ಹತೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಲಿಂಗ ವಿವಾಹದ ಕೆಲವು ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ನೀರಜ್ ಕಿಶನ್ ಕೌಲ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮರುಪರಿಶೀಲನಾ ಅರ್ಜಿಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸಲಿಂಗ ವಿವಾಹಗಳನ್ನು ಕಾನೂನಿನಲ್ಲಿ ಮಾನ್ಯವೆಂದು ಗುರುತಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ನ ಹಿಂದಿನ ನಿರ್ಧಾರವನ್ನು ಅರ್ಜಿಯು ಪ್ರಶ್ನಿಸಿದೆ. “ದಯವಿಟ್ಟು ಮರುಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಬಹಿರಂಗವಾಗಿ ವಿಚಾರಣೆ ನಡೆಸಬೇಕು” ಎಂದು ಕೌಲ್ ವಿನಂತಿಸಿಕೊಂಡಿದ್ದಾರೆ.
ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಜುಲೈ 10 (ಬುಧವಾರ) ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಆದರೆ, ಮುಕ್ತ ನ್ಯಾಯಾಲದ ಬದಲಾಗಿ ಚೇಂಬರ್‌ನಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣಾ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿವಿ ನಾಗರತ್ನ, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಇರಲಿದ್ದಾರೆ.
ಪರಿಶೀಲನಾ ಅರ್ಜಿಗಳನ್ನು ಚೇಂಬರ್‌ಗಳಲ್ಲಿ ವಿಚಾರಣೆ ನಡೆಸಲಾಗುವುದು. ಅಲ್ಲಿ ಅರ್ಜಿದಾರರು, ಪ್ರತಿವಾದಿಗಳು, ವಕೀಲರು ಅಥವಾ ದಾವೆದಾರರು ಹಾಜರಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದಾಗ್ಯೂ, ವಿಚಾರಣೆಯು ನ್ಯಾಯಾಲಯದ ಪಡಸಾಲೆಯಲ್ಲಿ ವಿಚಾರಣೆ ಸೂಕ್ತವೆಂದು ಅರ್ಜಿದಾರರು ಭಾವಿಸಿದರೆ ನ್ಯಾಯಾಲಯಕ್ಕೆ ಅಥವಾ ಸುಪ್ರೀಂ ಕೋರ್ಟ್‌ನ ಆಯಾ ಪೀಠಕ್ಕೆ ಮನವಿ ಮಾಡಲು ಅವಕಾಶವಿದೆ.
ಈ ವರದಿ ಓದಿದ್ದೀರಾ?: ದಲಿತರು-ಬುಡಕಟ್ಟು ಜನರು ಹಾಗೂ ಹಿಂದುಳಿದವರೇ ಉಷ್ಣೋಗ್ರತೆಯ ಬಲಿಪಶುಗಳು
ಕಳೆದ ವರ್ಷ ಅಕ್ಟೋಬರ್ 17 ರಂದು, ಒಂದು ಮಹತ್ವದ ತೀರ್ಪಿನಲ್ಲಿ, ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
“ಸಲಿಂಗ ವಿವಾಹವನ್ನು ಕಾನೂನುಬದ್ದಗೊಳಿಸುವ ಅಧಿಕಾರವು ಕೇವಲ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ವ್ಯಾಪ್ತಿಗೆ ಬರುತ್ತದೆ. ಶಾಸಕಾಂಗವು ಅನುಚ್ಛೇದ 14 ಮತ್ತು 15(3)ಗೆ ತಿದ್ದುಪಡಿ ತಂದು, ಸಲಿಂಗ ವಿವಾಹ ಸಂಬಂಧ ಕಾನೂನನ್ನು ರಚಿಸಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಶಾಸಕಾಂಗಕ್ಕೆ ಸಕಾರಾತ್ಮಕ ನಿರ್ದೇಶನವನ್ನು ನೀಡಲು ತಮಗೆ ಅಧಿಕಾರವಿಲ್ಲ ಎಂದೂ ಕೋರ್ಟ್ ಹೇಳಿತ್ತು.