ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಇಂದು(ಮಾ.05) ಭೇಟಿ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸಂದೇಶ್‌ಖಾಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದಾರೆ.
ಈ ಮೊದಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಕೂಡ ಟಿಎಂಸಿ ಆಡಳಿತವಿರುವ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ,ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಪರಿಸ್ಥಿತಿ ಇನ್ನೂ ಭಯಾನಕವಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
“ಸಂದೇಶ್‌ಖಾಲಿ ಒಂದು ಪ್ರತ್ಯೇಕವಾದ ಘಟನೆಯಲ್ಲ. ಈ ಮೊದಲು ರಾಜ್ಯದಲ್ಲಿ ಹಲವು ಹಿಂಸಾಚಾರ ಘಟನೆಗಳು ವರದಿಯಾಗಿವೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ರಾಷ್ಟ್ರೀಯ ಮಹಿಳಾ ಆಯೋಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಲು ರಾಷ್ಟ್ರಪತಿ ದ್ರಾಪದಿ ಮುರ್ಮು ಅವರಿಗೆ ಶಿಫಾರಸ್ಸು ಮಾಡುತ್ತದೆ” ಎಂದು ಹೇಳಿದರು.
ರಾಷ್ಟ್ರಪತಿ ಅವರು ಕೂಡ ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದಿದ್ದು, ಅದನ್ನು ನಿಕಟವಾಗಿ ಮೇಲ್ವಿಚಾರಣೆಗೊಳಿಸುತ್ತಿರುವುದಾಗಿ ತಮಗೆ ತಿಳಿಸಿದ್ದಾರೆ ಎಂದು ರೇಖಾ ಶರ್ಮಾ ಹೇಳಿದರು.
ಟಿಎಂಸಿ ನಾಯಕ ಶಹಜಹಾನ್ ಶೇಖ್ ಹಾಗೂ ಆತನ ತಂಡ ತಮ್ಮ ಜಾಗವನ್ನು ಕಬಳಿಸುವುದರ ಜೊತೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಸಂದೇಶ್‌ಖಾಲಿಯ ಮಹಿಳೆಯರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಜಹಾನ್ ಶೇಖ್‌ನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.
