ಸಂಗಮ ಹಾಗೂ ಕುಂಭಮೇಳ ನಡೆಯುವ ಸ್ಥಳಗಳಲ್ಲಿನ ನೀರಿನಲ್ಲಿ ಮಲ ಬ್ಯಾಕ್ಟೀರಿಯವಿದೆ ಎಂಬ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯನ್ನು ತಳ್ಳಿಹಾಕಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ ಕುಡಿಯಲು ಕೂಡ ಯೋಗ್ಯವಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ, ಸನಾತನ ಧರ್ಮ, ಗಂಗಾ ನದಿ, ಭಾರತದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಿರುವ ಕೋಟ್ಯಂತರ ಜನರ ನಂಬಿಕೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ನೀರಿನಲ್ಲಿ ಮಲದ ಬ್ಯಾಕ್ಟೀರಿಯಾ ಎನ್ನುವುದು ಅಪಪ್ರಚಾರವಾಗಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಕೋಟ್ಯಂತರ ಜನರು ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಯಾಗರಾಜ್ನಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಸಂಸ್ಕರಿಸದ ಕೊಳಚೆ ನೀರನ್ನು ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ವರದಿ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಂತು ಬೇಸಿಗೆ, ತತ್ವಾರ ತಂತು ನೀರಿಗೆ, ಅನುಕೂಲ ಅವಕಾಶವಾದಿಗಳಿಗೆ!
ಪ್ರಾಣಿ ಹಾಗೂ ಮನುಷ್ಯರಿಂದ ಹೊರ ಹಾಕಲ್ಪಡುವ ಮಲದಲ್ಲಿ ಹಾನಿಕಾರಿಕ ಬ್ಯಾಕ್ಟೀರಿಯಾಗಳಿರುತ್ತವೆ. ಇಂತಹ ಬ್ಯಾಕ್ಟೀರಿಯಾ ಕುಂಭಮೇಳ ನಡೆಯುವ ಹಲವು ಸ್ಥಳಗಳ ನೀರಿನಲ್ಲಿ ಕಂಡುಬಂದಿವೆ. ಈ ಬ್ಯಾಕ್ಟೀರಿಯಾಗಳಿಂದ ಹಲವು ರೀತಿಯ ರೋಗಗಳಿಗೆ ಕಾರಣವಾಗುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಮಹಾಕುಂಭ ಮೇಳ ಮುಕ್ತಾಯಗೊಳ್ಳಲು ಕೇಲವ 7 ದಿನಗಳು ಮಾತ್ರ ಬಾಕಿಯುಳಿದಿದೆ. ಅಂಕಿಅಂಶಗಳ ಪ್ರಕಾರ 56 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಕುಂಭಮೇಳವನ್ನು ಯಾವುದೇ ಪಕ್ಷ ಅಥವಾ ಸಂಘಟನೆ ಆಯೋಜಿಸಿಲ್ಲ. ಇದು ಸಮಾಜದ ಕಾರ್ಯಕ್ರಮ. ಸರ್ಕಾರವು ಸೇವಕನ ರೀತಿಯಲ್ಲಿ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ದೇಶ ಹಾಗೂ ವಿಶ್ವವು ಈ ಮೇಳದಲ್ಲಿ ಭಾಗವಹಿಸಿ ಉನ್ನತವಾಗಿ ಯಶಸ್ವಿಗೊಳಿಸಿದೆ. ಕುಂಭ ಮೇಳದಲ್ಲಿ ಕಾಲ್ತುಳಿತಕ್ಕೊಳಗಾಗಿ ಹಾಗೂ ಅಪಘಾತದಿಂದ ಮೃತಪಟ್ಟ ಜನರ ಕುಟುಂಬದೊಂದಿಗೆ ನಮ್ಮ ಸರ್ಕಾರ ಸದಾ ಬೆನ್ನೆಲುಭಾಗಿ ನಿಲ್ಲುತ್ತದೆ. ಸುಳ್ಳು ಪ್ರಚಾರವನ್ನು ನಿರ್ಲಕ್ಷಿಸಿ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
