ಕೆಡಿ (KD) ಚಿತ್ರದ ಸರ್ಸೆ ಸೆರಗ ಸರ್ಸೆ ಹಾಡು ಕನ್ನಡದಲ್ಲಿ ಮಾತ್ರವಲ್ಲ ಹಿಂದಿಯಲ್ಲೂ ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಿಂದಿಯಲ್ಲಿ ‘ಸರ್ಕೆ ಚುನರ್ ತೇರಿ ಸರ್ಕೆ’ ಎಂಬ ಹಾಡು ಮತ್ತು ಅದರ ನೃತ್ಯ ಸಂಯೋಜನೆಯ ವಿಚಾರದಲ್ಲಿ ನಟ ಸಂಜಯ್ ದತ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ (NCW) ಸಮನ್ಸ್ ಜಾರಿಗೊಳಿಸಿತ್ತು. ಸೋಮವಾರ ಸಂಜಯ್ ದತ್ ವಿಚಾರಣೆಗಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.
ಈ ಹಾಡಿನಲ್ಲಿ ಸಂಜಯ್ ದತ್ ಜೊತೆಗೆ ನಟಿ ನೋರಾ ಫತೇಹಿ ಕೂಡ ಅಭಿನಯಿಸಿದ್ದರು. ಆದ್ದರಿಂದ ಅವರಿಗೂ ಮಹಿಳಾ ಆಯೋಗ ಸಮನ್ಸ್ ನೀಡಿದೆ. ಸದ್ಯ ಸಂಜಯ್ ದತ್ ದೆಹಲಿಯಲ್ಲಿರುವ ಆಯೋಗದ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿಗೆ ಆಕ್ರೋಶ: ತಕ್ಷಣ ಕ್ರಮಕ್ಕೆ ಮಹಿಳಾಪರ ಸಂಘಟನೆಗಳ ಆಗ್ರಹ
ಈ ಹಿಂದೆ ಕನ್ನಡ ಚಲನಚಿತ್ರ ನಿರ್ಮಾಪಕ ಪ್ರೇಮ್ ಮತ್ತು ಗೀತರಚನೆಕಾರ ರಕೀಬ್ ಆಲಂ ತಮ್ಮ ಈ ವಿವಾದಾತ್ಮಕ ಹಾಡಿನ ವಿಚಾರದಲ್ಲಿ ಮಹಿಳಾ ಆಯೋಗಕ್ಕೆ ಲಿಖಿತ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ಮುಂದಿನ ಮೂರು ತಿಂಗಳುಗಳಲ್ಲಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧರಾಗಿರುವುದಾಗಿ, ಈ ಸಂಬಂಧ ವಿವರವಾದ ವರದಿ ನೀಡುವುದಾಗಿ ಹೇಳಿದ್ದಾರೆ.
NCW ಅಧ್ಯಕ್ಷೆ ವಿಜಯ ರಹತ್ಕರ್ ಅಧ್ಯಕ್ಷತೆಯಲ್ಲಿ ಆಯೋಗವು ಕೈಗೆತ್ತಿಕೊಂಡ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಬ್ಬರೂ ಕ್ಷಮೆಯಾಚಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ NCW ಅಧ್ಯಕ್ಷರು ಇಬ್ಬರ ವಾದಗಳನ್ನು ತಿರಸ್ಕರಿಸಿದ್ದರು. ಈ ಹಾಡು ಮಹಿಳೆಯರ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದರು.
ನಟಿ ನೋರಾ ಫತೇಹಿ ಏಪ್ರಿಲ್ 6ರಂದು ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಖುದ್ದಾಗಿ ಬರದೆ ಕೇವಲ ತಮ್ಮ ವಕೀಲರನ್ನು ಕಳುಹಿಸಿದ್ದರು. ನೋರಾ ಪರವಾಗಿ ವಕೀಲರು ಹಾಜರಾಗಿದ್ದನ್ನು ಒಪ್ಪದ ಮಹಿಳಾ ಆಯೋಗ ನಟಿಯೇ ಖುದ್ದಾಗಿ ವಿಚಾರಣೆಗೆ ಬರಬೇಕು ಎಂದು ತಾಕೀತು ಮಾಡಿತ್ತು. ಏಪ್ರಿಲ್ 27ರಂದು ಹಾಜರಾಗುವಂತೆ ಎರಡನೇ ಸಮನ್ಸ್ ನೀಡಿತ್ತು.





