ಆಪರೇಷನ್ ಸಿಂಧೂರ ಬಗ್ಗೆ ಪೋಸ್ಟ್ ಮಾಡಿದ್ದ ಕಾರಣ ತಮ್ಮ ಬಂಧನ ಮಾಡಿರುವುದನ್ನು ಪ್ರಶ್ನಿಸಿ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಇಂದು ಅಥವಾ ನಾಳೆ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಆಪರೇಷನ್ ಸಿಂಧೂರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ನಾಯಕರೊಬ್ಬರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ ಬಗ್ಗೆ ಪೋಸ್ಟ್ ಮಾಡಿದ ಪ್ರಾಧ್ಯಾಪಕ ಅಲಿ ಖಾನ್ ಬಂಧನ; ಸಚಿವ ವಿಜಯ್ ಶಾ ಬಂಧನವೇಕಿಲ್ಲ: ವಿಪಕ್ಷಗಳ ಪ್ರಶ್ನೆ
ಸದ್ಯ ಪ್ರಾಧ್ಯಾಪಕರ ಬಂಧನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಎಸ್‌ಪಿ ನಾಯಕರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅಲಿ ಖಾನ್ ಅವರ ಬಂಧನವನ್ನು ಟೀಕಿಸಿದ್ದಾರೆ. ಹಾಗೆಯೇ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಿಜೆಪಿ ಸಚಿವ ವಿಜಯ್ ಶಾ ಬಂಧನವೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.
BREAKING: Ashoka University prof Ali Khan Mahmudabad arrested over Operation Sindoor remarks moves Supreme Court
— Bar and Bench (@barandbench) May 19, 2025
Haryana Police had arrested Ali Khan Mahmudabad on May 18, following the registration of two separate cases over his Facebook remarks.
Read more:… pic.twitter.com/GWF8GAbVj0
ಈ ನಡುವೆ ತನ್ನ ಬಂಧನವನ್ನು ಪ್ರಶ್ನಿಸಿ ಅಲಿ ಖಾನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಾಧ್ಯಾಪಕರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ಈ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.
“ದೇಶಭಕ್ತಿಯ ಹೇಳಿಕೆ ನೀಡಿದ ಕಾರಣಕ್ಕಾಗಿ ಅವರನ್ನು (ಅಲಿ ಖಾನ್) ಬಂಧಿಸಲಾಗಿದೆ. ದಯವಿಟ್ಟು ಅರ್ಜಿ ವಿಚಾರಣೆಯನ್ನು ಮಂಗಳವಾರ ಅಥವಾ ಬುಧವಾರ ನಡೆಸಿ” ಎಂದು ಕಪಿಲ್ ಸಿಬಲ್ ಕೋರಿದರು. ಈ ವಿನಂತಿಯನ್ನು ಒಪ್ಪಿಕೊಂಡ ಸಿಜೆಐ ಗವಾಯಿ ಅವರು ಅರ್ಜಿಯ ಶೀಘ್ರ ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿದ್ದಾರೆ.
