ಪ್ರಸ್ತುತ ದೇಶದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಅದರಲ್ಲೂ ಪೊಲೀಸ್ ಸೋಗಿನಲ್ಲಿ, ನ್ಯಾಯಾಧೀಶರ ಸೋಗಿನಲ್ಲಿ ವಿಡಿಯೋ ಕರೆ ಮಾಡಿ ಹಣ ದೋಚುವ ಅದೆಷ್ಟೋ ಪ್ರಕರಣಗಳು ವರದಿಯಾಗುತ್ತಿದೆ. ಹೀಗೆಯೇ ವಂಚಕನೋರ್ವ ಮುಂಬೈ ಪೊಲೀಸ್ ಸೋಗಿನಲ್ಲಿ ಪೊಲೀಸ್ ಅಧಿಕಾರಿಯೋರ್ವರಿಗೆಯೇ ಕರೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಕೇರಳದಲ್ಲಿ ಇಂತಹ ಘಟನೆ ನಡೆದಿದೆ. ವಂಚಕನೋರ್ವ ಪೊಲೀಸ್ ಅಧಿಕಾರಯ ಸೋಗಿನಲ್ಲಿ ನಿಜವಾಗಿ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಡಿಯೋ ಕರೆ ಮಾಡಿದ್ದಾನೆ. ಕೇರಳದ ತ್ರಿಶೂರ್ ಪೊಲೀಸರು ಈ ವಿಡಿಯೋ ಕರೆಯ ಸಂಪೂರ್ಣ ಸಂಭಾಷಣೆಯನ್ನು ವಿಡಿಯೋ ಮಾಡಿಕೊಂಡು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಹುಲಿಯನ್ನು ಹಿಡಿದ ಹುಲಿ” ಎಂದು ತ್ರಿಶೂರ್ ಪೊಲೀಸರು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಂಚನೆ: ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ
ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ವಂಚಕನು ತನ್ನನ್ನು ತಾನು ಮುಂಬೈನ ಅಧಿಕಾರಿ ಎಂದು ಪರಿಚಯಿಸಿಕೊಳ್ಳುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಮೊದಲು ತ್ರಿಶೂರ್ ಪೊಲೀಸ್ ಅಧಿಕಾರಿ ವಂಚಕನಿಗೆ ತನ್ನ ಮುಖ ತೋರಿಸಿದೆಯೇ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿಕೊಂಡು ಕರೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ವೇಳೆಯೇ ವಂಚಕನ ಕಾಲರ್ ಐಡಿ, ವಿಳಾಸವನ್ನು ಟ್ರಾಕ್ ಮಾಡಲಾಗಿದೆ. ಅದಾದ ಬಳಿಕ “ನೀವು ಏನು ಮಾಡುತ್ತೀರಿ” ಎಂದು ಕ್ಯಾಮೆರಾದಲ್ಲಿ ಸಮವಸ್ತ್ರ ಧರಿಸಿದ್ದ ಪೊಲೀಸ್ ಅಧಿಕಾರಿ ಪ್ರಶ್ನಿಸಿದ್ದಾರೆ. ಇದನ್ನು ನೋಡಿ ವಂಚಕ ಆಘಾತಕ್ಕೊಳಗಾಗಿರುವುದು ಕಂಡುಬಂದಿದೆ.
“ಮೊದಲು ಈ ಕೆಲಸವನ್ನು ಮಾಡುವುದನ್ನು ನಿಲ್ಲಿಸಿ. ನನ್ನ ಬಳಿ ನಿಮ್ಮ ವಿಳಾಸ, ನಿಮ್ಮ ಸ್ಥಳ ಮತ್ತು ಎಲ್ಲವೂ ಇದೆ. ಇದು ಸೈಬರ್ ಸೆಲ್. ನೀವು ಈ ಕೆಲಸವನ್ನು ಮಾಡುವುದನ್ನು ನಿಲ್ಲಿಸುವುದು ಉತ್ತಮ” ಎಂದು ವಂಚಕನಿಗೆ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತ್ರಿಶೂರ್ ನಗರ ಪೊಲೀಸರು ಮಂಗಳವಾರ ಈ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ. ಈವರೆಗೆ 11,255 ಲೈಕ್‌ಗಳು ಮತ್ತು 2,53,000 ಜನರು ಈ ವಿಡಿಯೋವನ್ನು ನೋಡಿದ್ದಾರೆ. ಹಾಗೆಯೇ ನೆಟ್ಟಿಗರು ಪೊಲೀಸರ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
