ತಾನು ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಬಡ್ಡಿ ಮೊತ್ತವನ್ನು ಪಡೆಯುವ ಆಸೆಯಲ್ಲಿ ಶಾಲಾ ಶಿಕ್ಷಕರೊಬ್ಬರು ಆನ್‌ಲೈನ್ ಹೂಡಿಕೆ ಮಾಡಿ ಬರೋಬ್ಬರಿ 66 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ 54 ವರ್ಷದ ಶಾಲಾ ಶಿಕ್ಷಕರು ಆನ್‌ಲೈನ್ ಹೂಡಿಕೆ ಹಗರಣಕ್ಕೆ ಬಲಿಯಾಗಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸೈಬರ್ ವಂಚನೆ | ಆನ್ಲೈನ್ನಲ್ಲಿ ₹82 ಲಕ್ಷ ಕಳೆದುಕೊಂಡ ಟೆಕ್ಕಿ
“ಸುನೀತಾ ಚೌಧರಿ ಎಂದು ಗುರುತಿಸಿಕೊಂಡ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡಿದ್ದರು. ಬಡ್ಡಿ ಮೂಲಕ ಅಧಿಕ ಆದಾಯವನ್ನು ಪಡೆಯುವ ಭರವಸೆ ನೀಡಿ ವೆಬ್‌ಸೈಟ್ ಒಂದರಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದರು” ಎಂದು ಕಲ್ಯಾಣ್ ನಿವಾಸಿ ಶಿಕ್ಷಕ ಪೊಲೀಸರಿಗೆ ತಿಳಿಸಿದ್ದಾರೆ.
ಶಿಕ್ಷಕ 50 ದಿನಗಳಲ್ಲಿ ಈ ಯೋಜನೆಯಲ್ಲಿ ಸುಮಾರು 66 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಕೊಲ್ಸೆವಾಡಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಆದರೆ ಯಾವುದೇ ಮೊತ್ತ ಬಾರದ ಕಾರಣ ಹೂಡಿಕೆಯ ಮೊತ್ತದ ಮರುಪಾವತಿ ಮಾಡುವಂತೆ ಕೇಳಲು ಆ ಮಹಿಳೆಯ ಎರಡು ಮೊಬೈಲ್ ನಂಬರ್‌ಗಳಿಗೂ ಕರೆ ಮಾಡಿದ್ದು ಸಂಪರ್ಕ ಲಭ್ಯವಾಗಿಲ್ಲ. ಇದಾದ ಬಳಿಕ ಶಿಕ್ಷಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯ ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಆನ್‌ಲೈನ್ ವಂಚನೆ, ಸೈಬರ್ ಕ್ರೈಮ್ ಪ್ರಕರಣಗಳು ಅಧಿಕವಾಗುತ್ತಿದೆ. ಅದರಲ್ಲೂ ಹೆಚ್ಚಾಗಿ ಶಿಕ್ಷಕರು, ಇಂಜಿನಿಯರ್‌ಗಳು, ಪತ್ರಕರ್ತರಂತಹ ವಿದ್ಯಾವಂತರೇ ಈ ಜಾಲದಲ್ಲಿ ಸಿಲುಕುತ್ತಿದ್ದಾರೆ. ಈ ಹಿಂದೆ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡಿದ್ದ ವಂಚಕರು ಇದೀಗ ಹೆಚ್ಚಾಗಿ ಟೆಕ್ಕಿಗಳನ್ನು ಬಲೆಗೆ ಬೀಳಿಸುತ್ತಿದ್ದಾರೆ.
