ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಒಳಮೀಸಲಾತಿ ಜಾರಿಯಲ್ಲಿ ‘ಕ್ರೀಮಿ ಲೇಯಲ್’ ಕ್ರಮವನ್ನು ಅಳವಡಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಬುಧವಾರ ‘ಭಾರತ್ ಬಂದ್’ಗೆ ಕರೆಕೊಡಲಾಗಿದ್ದು, ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬಿಹಾರದ ಪಾಟ್ನಾದಲ್ಲಿಯೂ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ಉಪ ಜಿಲ್ಲಾಧಿಕಾರಿಗೇ ಹೊಡೆದಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಹಾರ ಪೊಲೀಸರು ಅಪಹಾಸ್ಯಕ್ಕೀಡಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ರಸ್ತೆ ಮಧ್ಯದಲ್ಲಿ ನಿಂತಿದ್ದ ಉಪ ಜಿಲ್ಲಾಧಿಕಾರಿಗೆ ಲಾಠಿಯಲ್ಲಿ ಹೊಡೆದಿದ್ದಾರೆ. ಮತ್ತೊಮ್ಮೆ ಹೊಡೆಯಲು ಮುಂದಾದಾಗ, ಇತರ ಪೊಲೀಸರು ಆತನನ್ನು ತಡೆದಿದ್ದಾರೆ. ಅವರು ಉಪ ಜಿಲ್ಲಾಧಿಕಾರಿ ಎಂದು ತಿಳಿಸಿದ್ದಾರೆ.
ಒಳಮೀಸಲಾತಿಯಲ್ಲಿ ಕ್ರೀಮಿ ಲೇಯರ್ ಅಳವಡಿಕೆಯು ಮೀಸಲಾತಿ ರದ್ದತಿಗೆ ಮುನ್ನುಡಿಯಾಗಲಿದೆ. ಕ್ರೀಮಿ ಲೇಯರ್ ಅಳವಡಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ‘ಮೀಸಲಾತಿ ಬಚಾವೋ ಸಂಘರ್ಷ ಸಮಿತಿ’ ಬುಧವಾರ ‘ಭಾರತ್ ಬಂದ್’ಗೆ ಕರೆಕೊಟ್ಟಿತ್ತು. ಬಂದ್ ಭಾಗವಾಗಿ ಎಲ್ಲಡೆ ಪ್ರತಿಭಟನೆಗಳು ನಡೆದಿವೆ. ವಿಶೇಷವಾಗಿ ಬಿಹಾರದಲ್ಲಿ ಪ್ರತಿಭಟನೆಯು ತೀವ್ರ ಸ್ವರೂಪದಲ್ಲಿ ನಡೆದಿದೆ.
ಪಾಟ್ನಾದಲ್ಲಿ, ಪ್ರತಿಭಟನಾಕಾರರು ಪ್ರಮುಖ ರಸ್ತೆಗಳು ಮತ್ತು ರೈಲು ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರೈಲು-ವಾಹನಗಳನ್ನು ತಡೆದಿದ್ದಾರೆ. ಪ್ರತಿಭಟನೆಯನ್ನು ನಿಭಾಯಿಸಲಾಗದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.