ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಹೆಚ್ಚಾಗುತ್ತಿರುವ ನಡುವೆ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ದೆಹಲಿ, ಕಾಶ್ಮೀರ ಹಲವು ಖಾಸಗಿ ಶಾಲೆಗಳು ಬಂದ್ ಆಗಿವೆ. ಶುಕ್ರವಾರದಿಂದ ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ವಸಂತ್ ಕುಂಜ್‌ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್), ಪಶ್ಚಿಮ ವಿಹಾರ್‌ನ ಇಂದ್ರಪ್ರಸ್ಥ ವರ್ಲ್ಡ್ ಸ್ಕೂಲ್ ಮತ್ತು ಮಾಡೆಲ್ ಟೌನ್‌ನ ಕ್ವೀನ್ ಮೇರಿ ಸ್ಕೂಲ್‌ನಂತಹ ಶಾಲೆಗಳು ವರ್ಚುವಲ್ ತರಗತಿಗಳನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಸೋಮವಾರದಿಂದ ಬೇಸಿಗೆ ರಜೆ ಪ್ರಾರಂಭವಾಗುತ್ತಿದೆ. ಆದರೆ ನಾವು ಒಂದು ದಿನವೂ ಮಕ್ಕಳ ಭದ್ರತೆಗೆ ತೊಂದರೆ ಆಗುವ ಸಾಧ್ಯತೆಯನ್ನು ಎದುರಿಸಲು ಬಯಸಲ್ಲ ಎಂದು ಇಂದ್ರಪ್ರಸ್ಥ ವರ್ಲ್ಡ್ ಸ್ಕೂಲ್ ಪ್ರಾಂಶುಪಾಲರಾದ ಶಿಖಾ ಅರೋರಾ ಹೇಳಿದರು.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಸಂಘರ್ಷ | ರಾಂಚಿಯಲ್ಲಿ ನಕಲಿ ಸೇನಾ ಸಮವಸ್ತ್ರಗಳು ಪತ್ತೆ
ವಸಂತ್ ಕುಂಜ್‌ನ ಡಿಪಿಎಸ್ ಪ್ರಾಂಶುಪಾಲರಾದ ದೀಪ್ತಿ ವೋಹ್ರಾ ಅವರು ಸುರಕ್ಷತಾ ಮುನ್ನೆಚ್ಚರಿಕೆಯಾಗಿ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲಾಗಿದೆ ಎಂದು ಹೇಳಿದರು. ಈ ನಡುವೆ ಕ್ವೀನ್ ಮೇರಿ ಶಾಲೆಯ ಪ್ರಾಂಶುಪಾಲರಾದ ಅನುಪ್ಮಾ ಸಿಂಗ್ ಶಾಲೆಗೆ ಅಧಿಕ ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಶಾಲೆಗಳಲ್ಲಿ ತರಗತಿಗಳನ್ನು ಮುಂದುವರಿಸಿದ ಕೆಲವು ಶಾಲೆಗಳು ಕ್ಯಾಂಪಸ್‌ನಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿವೆ. ಮಕ್ಕಳಿಗೆ ಸುರಕ್ಷತಾ ಕ್ರಮಗಳ ಕುರಿತು ವಿವರಿಸಲಾಗಿದೆ ಎಂದು ವರದಿಯಾಗಿದೆ.
ಆದರೆ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಯೊಬ್ಬರು, “ಇಂದು ಶಾಲೆಗಳನ್ನು ಮುಚ್ಚಲು ಅವರಿಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ” ಎಂದು ಹೇಳಿದರು.
26 ಭಾರತೀಯರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಇತ್ತೀಚೆಗೆ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದಾದ ಬಳಿಕ ಪಾಕಿಸ್ತಾನ ಭಾರತದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.
