ಮುಂಗಾರು ಮಳೆಯ ಅಬ್ಬರ ಮತ್ತು ನೆರೆಯ ನೇಪಾಳ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಿಹಾರದಲ್ಲಿ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಪರಿಸ್ಥಿತಿ ಭೀಕರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ವರದಿಯ ಪ್ರಕಾರ, 12 ಜಿಲ್ಲೆಗಳ 70ಕ್ಕೂ ಹೆಚ್ಚು ತಾಲೂಕುಗಳ (ಪ್ರಖಂಡ) 368 ಪಂಚಾಯತಿಗಳಲ್ಲಿ ಸುಮಾರು 22.42 ಲಕ್ಷಕ್ಕೂ ಹೆಚ್ಚು (23 ಲಕ್ಷ) ಮಂದಿ ಪ್ರವಾಹದ ತೀವ್ರ ಪ್ರಭಾವಕ್ಕೆ ಒಳಗಾಗಿದ್ದಾರೆ.
ಬಿಹಾರದಲ್ಲಿ ಹಾದುಹೋಗುವ ಗಂಗಾ, ಕೋಸಿ, ಗಂಡಕ್, ಬೂಢಿ ಗಂಡಕ್, ಬಾಗಮತಿ ಹಾಗೂ ಪುನ್‌ಪುನ್ ಸೇರಿದಂತೆ ಪ್ರಮುಖ ನದಿಗಳು ಭೋರ್ಗರೆಯುತ್ತಿವೆ. ರಾಜಧಾನಿ ಪಟನಾದ ಗಾಂಧಿ ಘಾಟ್‌ನಲ್ಲಿ ಗಂಗಾ ನದಿಯ ಜಲಮಟ್ಟವು 50.57 ಮೀಟರ್‌ಗೆ ತಲುಪಿದೆ. ಈ ಹಿಂದೆ 2016ರಲ್ಲಿ ತಲುಪಿದ್ದ 50.52 ಮೀಟರ್‌ಗಳ ಸಾರ್ವಕಾಲಿಕ ದಾಖಲೆಯನ್ನು ಈ ಬಾರಿ ಗಂಗಾ ನದಿ ಮುರಿದಿದೆ. ಪರಿಣಾಮವಾಗಿ, ಪಟನಾ ನಗರದ ಹಲವು ತಗ್ಗು ಪ್ರದೇಶಗಳು ಹಾಗೂ ಗ್ರಾಮೀಣ ಭಾಗಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
ಇದನ್ನೂ ಓದಿ: ಬಿಹಾರ ಪೊಲೀಸರಿಂದ ಕೊಲೆಯಾದ ಭರತ್ ತಿವಾರಿ: ‘ಯುಪಿ ಮಾಡೆಲ್’ನ ಹೊಸ ಆಯಾಮವೇ?
ತೀವ್ರ ಬಾಧಿತ ಜಿಲ್ಲೆಗಳು
ಪ್ರವಾಹದಿಂದಾಗಿ ಪಟನಾ, ಭಾಗಲ್ಪುರ, ಮುಂಗೇರ್, ಕಟಿಹಾರ್, ಖಗರಿಯಾ, ಸರನ್, ಬಕ್ಸರ್, ಭೋಜ್‌ಪುರ (ಆರಾ), ವೈಶಾಲಿ, ಸಮಸ್ತಿಪುರ, ಸೀವಾನ್ ಮತ್ತು ಬೇಗುಸರಾಯ್ ಜಿಲ್ಲೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸರನ್ ಜಿಲ್ಲೆಯ ದರಿಯಾಪುರದಲ್ಲಿ ಮಹೀ ನದಿಯ ತಡೆಗೋಡೆ (ತಟಬಂಧ) 20 ಅಡಿಗಳಷ್ಟು ಬಿರುಕು ಬಿಟ್ಟು ಒಡೆದುಹೋಗಿದೆ. ಇದರಿಂದಾಗಿ 12ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಸಮಸ್ತಿಪುರದಲ್ಲಿ ಫೋರ್‌ಲೇನ್ ಅಂಡರ್‌ಪಾಸ್‌ನ ತಡೆಗೋಡೆ ಕುಸಿದುಬಿದ್ದಿದೆ.
ಭಾಗಲ್ಪುರ ಮತ್ತು ಭೋಜ್‌ಪುರ ಜಿಲ್ಲೆಗಳಲ್ಲಿ ನದಿಯ ತೀವ್ರ ಹರಿವಿಗೆ ಕಡಲ್ಕೊರೆತ (Erosion) ಉಂಟಾಗಿ ನೂರಾರು ಕಾಂಕ್ರೀಟ್ ಮನೆಗಳು ನದಿಯಲ್ಲಿ ಕೊಚ್ಚಿಹೋಗಿವೆ. ಎನ್‌ಎಚ್-80 ಸೇರಿದಂತೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಮೇಲೆ 2 ರಿಂದ 3 ಅಡಿ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ.
ನೂರಾರು ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿರುವ ಕಾರಣ ಲಕ್ಷಾಂತರ ಜನರು ರಾಷ್ಟ್ರೀಯ ಹೆದ್ದಾರಿಗಳು, ಎತ್ತರದ ತಂಗುದಾಣಗಳು, ಬಂಜ್ ಮತ್ತು ಕಾಂಕ್ರೀಟ್ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ತಾತ್ಕಾಲಿಕ ಮಚಾನ್‌ಗಳನ್ನು (ಪರಿಹಾರ ಗುಡಿಸಲು) ನಿರ್ಮಿಸಿಕೊಂಡು ದಿನ ದೂಡುತ್ತಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಶ್ರಮಿಸುತ್ತಿವೆ. ಎನ್‌ಡಿಆರ್‌ಎಫ್‌ನ 10 ತುಕಡಿಗಳು ಮತ್ತು ಎಸ್‌ಡಿಆರ್‌ಎಫ್‌ನ 27 ವಿಶೇಷ ತುಕಡಿಗಳನ್ನು ಕಷ್ಟದಲ್ಲಿರುವ ಜನರ ರಕ್ಷಣೆಗೆ ನಿಯೋಜಿಸಲಾಗಿದೆ. ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು 1,400ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಬೋಟ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ.
ಸಂತ್ರಸ್ತರಿಗಾಗಿ 900ಕ್ಕೂ ಹೆಚ್ಚು ‘ಕಮ್ಯುನಿಟಿ ಕಿಚನ್’ (ಸಾಮುದಾಯಿಕ ಉಚಿತ ಅಡುಗೆ ಕೇಂದ್ರ) ಹಾಗೂ ನೂರಾರು ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದೆ. ಸಿದ್ಧಪಡಿಸಿದ ಆಹಾರ, ಒಣ ಉಪಹಾರ, ಕುಡಿಯುವ ನೀರು ಮತ್ತು ಒಆರ್‌ಎಸ್ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಜಲಜನ್ಯ ರೋಗಗಳು ಹರಡದಂತೆ ತಡೆಯಲು ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ. ಪ್ರಾಣಿಗಳ ರಕ್ಷಣೆಗಾಗಿ ಪಶುವೈದ್ಯಕೀಯ ಕ್ಯಾಂಪ್‌ಗಳನ್ನು ತೆರೆಯಲಾಗಿದೆ.





