ಬಿಹಾರದ ನಕಲಿ ಎನ್‌ಕೌಂಟರ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆಯಾಗಿದ್ದರೆ ಇಷ್ಟೊಂದು ಆಕ್ರೋಶ ನಾವು ನೋಡಲು ಸಿಗುತ್ತಿತ್ತೆ? ಬಿಜೆಪಿ ನಾಯಕರು ಈ ಎನ್‌ಕೌಂಟರ್ ಅನ್ನು ಖಂಡಿಸಿ ಹೇಳಿಕೆ ನೀಡುತ್ತಿದ್ದರೆ? ಉತ್ತರ ಪ್ರದೇಶದ ಎನ್‌ಕೌಂಟರ್ ಮಾದರಿಯೇ ಈ ನಕಲಿ ಎನ್‌ಕೌಂಟರ್‌ಗೆ ಪ್ರೇರಣೆಯಲ್ಲವೇ?
ವಾಸ್ತವದಲ್ಲಿ ಎನ್‌ಕೌಂಟರ್ ಸಂಸ್ಕೃತಿಯೇ ಸಂವಿಧಾನ ವಿರೋಧಿ. ಆದರೂ ಸಾಮಾನ್ಯವಾಗಿ ಎನ್‌ಕೌಂಟರ್‌ಗಳು ಎಂದರೆ ಕಟುಕ ಅಪರಾಧಿಗಳು, ಉಗ್ರಗಾಮಿಗಳು ಅಥವಾ ಸಮಾಜ ಕಂಟಕರ ವಿರುದ್ಧ ನಡೆಯುವ ಪೊಲೀಸ್ ಕಾರ್ಯಾಚರಣೆ ಎಂಬ ಭಾವನೆ ಜನರದ್ದು. ಆದರೆ ಹಲವು ಪ್ರಕರಣಗಳಲ್ಲಿ ನಡೆಯುತ್ತಿರುವುದೇ ಬೇರೆ. ಈಗ ಅಪರಾಧ ಹಿನ್ನೆಲೆ ಇಲ್ಲದವರೂ ಈ ನಕಲಿ ಎನ್‌ಕೌಂಟರ್‌ಗಳಿಗೆ ಬಲಿಯಾಗುತ್ತಿದ್ದಾರೆ. ಅಂತಹ ಘಟನೆಗಳನ್ನು ಬಿಹಾರದ ಬಿಲೌತಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ 28ರ ಯುವಕ ಭರತ್ ಭೂಷಣ್ ತಿವಾರಿ ಎನ್‌ಕೌಂಟರ್ ಪ್ರಕರಣವೂ ಒಂದು.
ಜೂನ್ 17ರಂದು ಭರತ್ ಭೂಷಣ್ ತಿವಾರಿ ಅವರ ನಕಲಿ ಎನ್‌ಕೌಂಟರ್ ನಡೆದಿದೆ. ಯಾವುದೇ ಅಪರಾಧ ಹಿನ್ನಲೆ ಇಲ್ಲದ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಯ ಎನ್‌ಕೌಂಟರ್ ನಡೆದಿರುವುದು ಸದ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ತಿವಾರಿ ತನ್ನ ಕೈಯಲ್ಲಿದ್ದ ಪಿಸ್ತೂಲನ್ನು ಪೊಲೀಸರತ್ತ ಎಸೆದು ಶರಣಾದ ನಂತರವೇ ಪೊಲೀಸರು ಗುಂಡು ಹಾರಿಸಿರುವುದು ಸ್ಪಷ್ಟವಾಗಿ ಕೊಲೆ. ಈ ಘಟನೆ ಬಗ್ಗೆ ಪೊಲೀಸರು ಹೆಣೆದ ಕತೆಗಳು ಹತ್ತಾರು. ಆದರೆ ಘಟನೆ ವೇಳೆಯ ವಿಡಿಯೋ ಎಲ್ಲವನ್ನೂ ಬಹಿರಂಗಪಡಿಸಿದೆ. ಸದ್ಯ ಈ ಬಗ್ಗೆ ಬಿಹಾರ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: UP ಎನ್‌ಕೌಂಟರ್ ನೀತಿ: ಯೋಗಿ ಸರ್ಕಾರದ ವಿರುದ್ಧ BJP ಮೈತ್ರಿಪಕ್ಷ ಆಕ್ರೋಶ
ಅಷ್ಟಕ್ಕೂ ಯಾರು ಈ ಭರತ್ ಭೂಷಣ್ ತಿವಾರಿ?
ಭರತ್ ಭೂಷಣ್ ತಿವಾರಿ ಬಿಹಾರದ ಭೋಜಪುರ ಜಿಲ್ಲೆಯ ಷಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲೌತಿ ಗ್ರಾಮದ ಬಿಎಸ್‌ಸಿ ಪದವೀಧರ ಯುವಕ. ಸ್ಥಳೀಯರ ಮತ್ತು ಕುಟುಂಬದ ಪ್ರಕಾರ, ಈತ ಯಾವುದೇ ಅಪರಾಧ ಹಿನ್ನೆಲೆ ಹೊಂದಿರದ, ಸಮಾಜ ಕಲ್ಯಾಣದಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಸಾಮಾಜಿಕ ಕಾರ್ಯಕರ್ತ. ಕಳೆದ ವರ್ಷ ಬಿಹಾರದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಬಡವರು, ದಲಿತರು ಹಾಗೂ ವಂಚಿತ ವರ್ಗಗಳ ಪುನರ್ವಸತಿಗಾಗಿ ಈತ ನಿರಂತರವಾಗಿ ಧ್ವನಿ ಎತ್ತುತ್ತಿದ್ದ.
ಪ್ರವಾಹ ಪೀಡಿತರಿಗೆ ಸರ್ಕಾರ ಹಾಗೂ ಅಧಿಕಾರಿಗಳು ನೀಡಿದ ಭರವಸೆಗಳನ್ನು ಈಡೇರಿಸದಿದ್ದಕ್ಕೆ ಭರತ್ ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದ. ಈ ಸಂಬಂಧ ಫೇಸ್‌ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಧ್ವನಿ ಎತ್ತುತ್ತಿದ್ದ. ತನ್ನನ್ನು ‘ಕ್ರಾಂತಿಕಾರಿ’ ಎಂದು ಕರೆದುಕೊಳ್ಳುತ್ತಿದ್ದ. ಇದರಿಂದಾಗಿ ಸ್ಥಳೀಯವಾಗಿ ಜನಪ್ರಿಯವಾಗಿದ್ದ ಯುವಕ ಭರತ್ ತಿವಾರಿ.
ಜೂನ್ 16ರಂದು ಭರತ್ ಭೂಷಣ್ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಫೇಸ್‌ಬುಕ್ ಲೈವ್ ಬಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದ. ಜನಪ್ರತಿನಿಧಿಗಳು ಭರವಸೆ ಈಡೇರಿಸದಿದ್ದರೆ ಕಠಿಣ ಹಾದಿ ಹಿಡಿಯುವುದಾಗಿ ಎಚ್ಚರಿಸಿದ್ದ. ಜೂನ್ 16ರಂದು ಪೊಲೀಸರು ಆತನ ಮನೆಗೆ ಹೋದಾಗ ಪೊಲೀಸರತ್ತ ಆತ ಪಿಸ್ತೂಲ್ ತೋರಿಸಿದ್ದ ಎಂಬ ಆರೋಪವಿದೆ. ತಾಯಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಅದೇ ದಿನ ಪೊಲೀಸರು ಪ್ರಕಟಣೆ ಹೊರಡಿಸಿ, “ಭರತ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಆತನನ್ನು ಚಿಕಿತ್ಸೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದಿದ್ದರು.
ಜೂನ್ 17ರಂದು ಬೆಳಗ್ಗೆ ಭರತ್ ತಂಗಿದ್ದ ಜಾಗವನ್ನು ಭಾರಿ ಸಂಖ್ಯೆಯ STF ಮತ್ತು ಪೊಲೀಸರು ಸುತ್ತುವರೆದರು. ಭರತ್ ತನ್ನ ಕೊನೆಯ ಫೇಸ್‌ಬುಕ್ ಲೈವ್‌ನಲ್ಲಿ “ಅಧಿಕಾರಿಗಳು ನನ್ನ ಬೇಡಿಕೆಗಳನ್ನು ಈಡೇರಿಸುವುದಾದರೆ ಶಸ್ತ್ರಾಸ್ತ್ರಗಳನ್ನು ಕೆಳಗಿಡಲು ನನಗೆ ಯಾವುದೇ ಅಭ್ಯಂತರವಿಲ್ಲ” ಎಂದು ಹೇಳಿದ್ದ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ನಾವು ಗಮನಿಸಿದಾಗ ಭರತ್ ತನ್ನ ಪಿಸ್ತೂಲನ್ನು ದೂರ ಎಸೆದಿದ್ದ, ಪೊಲೀಸರ ಮುಂದೆ ಶರಣಾಗಲು ಸಿದ್ಧವಾಗಿದ್ದ. ಆದರೆ, ಅದೇ ಸಂದರ್ಭದಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಅದೂ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ. ಆತನನ್ನು ಪಟನಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಭರತ್ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ಮತ್ತು ಶರಣಾಗಲು ಸೂಚಿಸಿದರೂ ಪೊಲೀಸರ ಮೇಲೆಯೇ ಗುಂಡು ಹಾರಿಸಿದ. ಆತ್ಮರಕ್ಷಣೆಗಾಗಿ ತಾವು ತಿರುಗಿ ಬಿದ್ದಿದ್ದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಭರತ್ ತಾನಾಗಿಯೇ ಪಿಸ್ತೂಲ್ ಎಸೆದು ಶರಣಾಗುತ್ತಿದ್ದರೂ ಪೊಲೀಸರು ಗುಂಡು ಹಾರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಜೆಡಿಯು ನಾಯಕರು ಸೇರಿದಂತೆ ಹಲವು ನಾಯಕರು ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಮತ್ತು ಜೆಡಿಯು ನಾಯಕರು ಸೇರಿದಂತೆ ಹಲವು ರಾಜಕಾರಣಿಗಳು ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಭರತ್ ಬಡವರ ಧ್ವನಿಯಾಗಿದ್ದ, ಆತ ಶರಣಾದ ಮೇಲೆಯೂ ಗುಂಡಿಕ್ಕಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ” ಎಂದು ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸೇರಿದಂತೆ ಬಿಹಾರದ ವಿರೋಧ ಪಕ್ಷಗಳು ಈ ಘಟನೆಯನ್ನು ಖಂಡಿಸಿದ್ದಾರೆ.
ಇದು ಹಿಂದುತ್ವ, ಉತ್ತರ ಪ್ರದೇಶ ಮಾದರಿಯಲ್ಲವೇ?
ಈ ಎನ್‌ಕೌಂಟರ್ ಮಾಡಿರುವುದು ಪೊಲೀಸರು. ಆದರೆ ಇದಕ್ಕೆ ಸಿಕ್ಕ ಪ್ರೇರಣೆ ಯಾವುದು? ತ್ವರಿತ ನ್ಯಾಯದ ನೆಪದಲ್ಲಿ ನಡೆಯುವ ಕಾನೂನು ಬಾಹಿರ ಹತ್ಯೆಗಳು ಅಥವಾ ಎನ್‌ಕೌಂಟರ್‌ಗಳು, ಅದಕ್ಕೆ ಸಿಗುತ್ತಿರುವ ಸಾರ್ವಜನಿಕ ಬೆಂಬಲದ ಹಿಂದುತ್ವ ಮಾದರಿ ಅಥವಾ ಉತ್ತರ ಪ್ರದೇಶ ಮಾದರಿಯತ್ತ ನಾವೊಮ್ಮೆ ಕಣ್ಣುಹಾಯಿಸುವುದು ಉತ್ತಮ. ವಾಸ್ತವದಲ್ಲಿ ನಮಗೆ ತಿವಾರಿ ಈ ‘ಉತ್ತರ ಪ್ರದೇಶ ಮಾದರಿ’ಯ (ಯುಪಿ ಮಾಡೆಲ್) ಬಲಿಪಶುವಾಗಿ ಕಾಣುತ್ತಿದ್ದಾರೆ.
ಇದನ್ನೂ ಓದಿ: ಇದು ಮೋದಿಯ ರಾಮರಾಜ್ಯದ ಟ್ರೇಲರ್ ?
ಪೊಲೀಸರ ಕೆಲವು ವಿಚಿತ್ರ ಹೇಳಿಕೆಗಳೇ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. “ಭರತ್ ತಿವಾರಿ ಮಾನಸಿಕವಾಗಿ ಅಸ್ವಸ್ಥರು” ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ ಮಾನಸಿಕ ಅಸ್ವಸ್ಥರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬೇಕಾಗಿತ್ತೆ? ಯಾವುದೇ ಅಪರಾಧ ಹಿನ್ನಲೆ ಹೊಂದಿರದ ವ್ಯಕ್ತಿಯನ್ನು ನೂರಾರು ಪೊಲೀಸರು ಸುತ್ತುವರೆಯುವ ಅಗತ್ಯ ಏನಿತ್ತು? ಆತ ಶರಣಾದ ಬಳಿಕ ಮತ್ತೆ ಪೊಲೀಸರು ಗುಂಡು ಹಾರಿಸಿದ್ದು ಯಾಕೆ? ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ನಾಲ್ಕು ಗುಂಡು ಹಾರಿಸಿದ್ದು ಆತನನ್ನು ಕೊಲ್ಲುವ ಉದ್ದೇಶದಿಂದಲೇ ಅಲ್ಲವೇ? ಮೊದಲ ದಿನವೇ ಆತನ ಕೈಯಲ್ಲಿದ್ದ ಪಿಸ್ತೂಲನ್ನು ಪೊಲೀಸರು ತಮ್ಮ ವಶಕ್ಕೆ ಪಡೆಯಬಹುದಿತ್ತಲ್ಲವೇ? – ಹೀಗೆ ಹಲವು ಪ್ರಶ್ನೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವಂತದ್ದು.
ಇವೆಲ್ಲವನ್ನೂ ಮೀರಿ ಈ ನಕಲಿ ಎನ್‌ಕೌಂಟರ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆಯಾಗಿದ್ದರೆ ಇಷ್ಟೊಂದು ಆಕ್ರೋಶ ನಾವು ನೋಡಲು ಸಿಗುತ್ತಿತ್ತೆ? ಬಿಜೆಪಿ ನಾಯಕರು ಈ ಎನ್‌ಕೌಂಟರ್ ಅನ್ನು ಖಂಡಿಸಿ ಹೇಳಿಕೆ ನೀಡುತ್ತಿದ್ದರೆ? ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಹತ್ಯೆಗೆ ಸಂಪಾತ ಸೂಚಿಸುತ್ತಿದ್ದರೆ? ಏನೇ ಆದರೂ ಉತ್ತರ ಪ್ರದೇಶ ಮಾದರಿಯನ್ನು ಬೆಂಬಲಿಸುವ ನಂಬುವ ಸಿಎಂ ಪೊಲೀಸರಿಂದ ಕೊಲೆಯಾದ ವ್ಯಕ್ತಿ ಮುಸ್ಲಿಂ ಆಗಿದ್ದರೆ ನೀಡುವ ಹೇಳಿಕೆ ಇದೇ ಆಗಿರುತ್ತಿತ್ತು ಎಂಬ ನಂಬಿಕೆ ಇಟ್ಟುಕೊಳ್ಳಲಾಗದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



