ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವು ಒಂದು “ಕೊಳಕು ರಹಸ್ಯ” ಆಗಿದೆ. ಈ ವಿಷಯದ ಬಗ್ಗೆ ಯಾರೂ ಮಾತನಾಡಲು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಹಲವು ಮಹಿಳಾ ನ್ಯಾಯಾಧೀಶರೇ ತಮ್ಮ ಬಳಿ ಬಂದು ಪುರುಷ ನ್ಯಾಯಾಧೀಶರಿಂದ ಎದುರಾಗುತ್ತಿರುವ ಲೈಂಗಿಕ ಕಿರುಕುಳದ ಕುರಿತು ದೂರು ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ದಿವಂಗತ ಡಿ.ಎಸ್. ಬೋರ್ಕರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ (‘ಮೈ ವಿಷನ್ ಆಫ್ ಇಂಡಿಯಾ: 2047 ಎಡಿ’) ಮಾತನಾಡಿದ ಇಂದಿರಾ ಜೈಸಿಂಗ್, ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಬೇರೂರಿರುವ ‘ಸಂಪ್ರದಾಯಶೀಲ ಮತ್ತು ಶ್ರೇಣೀಕೃತ’ ಮನಸ್ಥಿತಿಯೇ ಇಂತಹ ಘಟನೆಗಳಿಗೆ ಮುಖ್ಯ ಕಾರಣ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ನ್ಯಾಯಾಧೀಶರು ಲಿಂಗ ಸಂವೇದನೆ ಕಲಿಯಬೇಕಾದ ತುರ್ತು!
ತಮ್ಮ ಭಾಷಣದ ವೇಳೆ ಮಹಿಳಾ ನ್ಯಾಯಾಧೀಶರೊಬ್ಬರು ಎದುರಿಸಿದ ಘಟನೆಯನ್ನು ನೆನಪಿಸಿಕೊಂಡ ಅವರು, “ಹೈಕೋರ್ಟ್ ನ್ಯಾಯಾಧೀಶರೊಬ್ಬರು ನಿವೃತ್ತರಾದಾಗ, ಜಿಲ್ಲಾ ನ್ಯಾಯಾಲಯದ ಮಹಿಳಾ ನ್ಯಾಯಾಧೀಶರು ಒಂದೇ ಬಣ್ಣದ ಸೀರೆ ಉಟ್ಟು ಸಾಲಾಗಿ ನಿಂತು ಪುರುಷ ನ್ಯಾಯಾಧೀಶರಿಗೆ ಹೂಮಳೆ ಗೈಯಬೇಕಾದ ಕೆಟ್ಟ ಆಚರಣೆ ಉನ್ನತ ನ್ಯಾಯಾಂಗದಲ್ಲಿದೆ. ಈ ರೀತಿಯ ವ್ಯವಸ್ಥೆಯನ್ನು ಪುರುಷ ನ್ಯಾಯಾಧೀಶರು ನಿರೀಕ್ಷಿಸುತ್ತಾರೆ, ಇದು ಮಹಿಳಾ ನ್ಯಾಯಾಧೀಶರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದರು.
ಅಷ್ಟೇ ಅಲ್ಲದೆ, ಪುರುಷ ನ್ಯಾಯಮೂರ್ತಿಯೊಬ್ಬರು ತಮ್ಮ 25ನೇ ಮದುವೆಯ ವಾರ್ಷಿಕೋತ್ಸವದ ಪಾರ್ಟಿಯಲ್ಲಿ ‘ಐಟಂ ಸಾಂಗ್’ಗೆ ಡ್ಯಾನ್ಸ್ ಮಾಡುವಂತೆ ಮಹಿಳಾ ನ್ಯಾಯಾಧೀಶೆಗೆ ಒತ್ತಾಯಿಸಿದ್ದರು. ಅದನ್ನು ನಿರಾಕರಿಸಿದ್ದಕ್ಕಾಗಿ ಆ ಮಹಿಳಾ ನ್ಯಾಯಾಧೀಶೆ ತಮ್ಮ ಉದ್ಯೋಗವನ್ನೇ ಕಳೆದುಕೊಳ್ಳಬೇಕಾಯಿತು ಎಂದು ಇಂದಿರಾ ಜೈಸಿಂಗ್ ಆಘಾತಕಾರಿ ಮಾಹಿತಿ ನೀಡಿದರು.
ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಡಾ. ಎಸ್. ಮುರಳೀಧರ್ ಅವರು ನ್ಯಾಯಾಂಗದಲ್ಲಿ ಜಾರಿಯಲ್ಲಿರುವ ಇಂತಹ ಹಳೆಯ ಮತ್ತು ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದ ಬೆನ್ನಲ್ಲೇ, ಇಂದಿರಾ ಜೈಸಿಂಗ್ ಕೂಡ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿ ಬೆಂಬಲ ವ್ಯಕ್ತಪಡಿಸಿದರು. ನ್ಯಾಯಾಂಗದ ಒಳಗೆ ನಡೆಯುವ ಇಂತಹ ಲೈಂಗಿಕ ಕಿರುಕುಳ ಮತ್ತು ತಾರತಮ್ಯದ ಬಗ್ಗೆ ತಕ್ಷಣವೇ ಸುಧಾರಣೆಗಳು ಆಗಬೇಕಿದೆ ಎಂದು ಅವರು ಪ್ರತಿಪಾದಿಸಿದರು.




