'ಶೋಲೆ' ಚಿತ್ರ ಬಿಡುಗಡೆಯಾಗಿ 50 ವರ್ಷಗಳಾದರೂ ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲವನ್ನು ಉಳಿಸಿಕೊಂಡಿದೆ. ಬದಲಾದ ಜಗತ್ತನ್ನು, ಹೊಸ ಜಗತ್ತಿನ ಜನರ ಮನವನ್ನು ಗೆಲ್ಲುತ್ತಲೇ ಸಾಗಿದೆ...
ರೋಮಾಂಚನ ಎಂಬ ಪದಕ್ಕೆ ನಿಜಕ್ಕೂ ಸರಿಸಾಟಿಯಾಗಬಲ್ಲದ್ದು ಏನಾದರೂ ಇದ್ದರೆ ಅದು- ‘ಶೋಲೆ’ ಚಿತ್ರ ಎಂಬುದು ನನ್ನ ಗ್ರಹಿಕೆ. ಭಾರತೀಯ ಸಿನಿಮಾರಂಗದಲ್ಲಿ ಮಹತ್ವದ ಮೈಲಿಗಲ್ಲಾಗಿ ನಿಂತ, ಸಾರ್ವಕಾಲಿಕ ಚಿತ್ರವೆಂದು ಸಾಮಾನ್ಯ ಪ್ರೇಕ್ಷಕರಿಂದಲೂ ಪ್ರಶಂಸೆ ಪಡೆದ ಶೋಲೆ- ಇವತ್ತಿಗೂ ಅದ್ಭುತ. ಇದು ಈ ಗಳಿಗೆಯಲ್ಲಿ ನೆನಪಾಗಿದ್ದೇಕೆಂದರೆ: ಶೋಲೆ ಬಿಡುಗಡೆಯಾದದ್ದು ಆಗಸ್ಟ್ 15, 1975ರಂದು. ಆಗಿನ ಬಾಂಬೆಯ ಪ್ರತಿಷ್ಠಿತ ಚಿತ್ರಮಂದಿರವೆಂದು ಖ್ಯಾತಿ ಪಡೆದಿದ್ದ, ಸೆವೆಂಟಿ ಎಂಎಂ ಸ್ಕ್ರೀನ್, ಸ್ಟಿರಿಯೋಫೋನಿಕ್ ಸೌಂಡ್ ಸಿಸ್ಟಮ್ ಹೊಂದಿದ್ದ ಮಿನರ್ವ ಥಿಯೇಟರ್‌ನಲ್ಲಿ.
ಆ ಕಾಲದಲ್ಲಿ ಗ್ರೆಗರಿ ಪೆಕ್, ಓಮರ್ ಶರೀಫ್ ನಟಿಸಿದ್ದ ‘ಮೆಕೆನ್ನಾಸ್ ಗೋಲ್ಡ್’ ಎಂಬ ಹಾಲಿವುಡ್ ಚಿತ್ರ ಪ್ರಪಂಚದಾದ್ಯಂತ ಭಾರೀ ಸದ್ದು ಮತ್ತು ಸುದ್ದಿ ಮಾಡಿತ್ತು. 70 ಎಂಎಂ ಚಿತ್ರವಾಗಿದ್ದ ಅದು, ಆಕ್ಷನ್ ದೃಶ್ಯಗಳನ್ನು ಇಡುಕಿರಿಸಿಕೊಂಡಿತ್ತು. ದೊಡ್ಡ ಪರದೆಯ ಮೇಲೆ ಕುದುರೆಯ ಕಾಲುಗಳ ಲಯಬದ್ಧ ಸಪ್ಪಳ, ಹಳ್ಳ ದಾಟುವ ದೃಶ್ಯಗಳು- ಪ್ರೇಕ್ಷಕನ ಎದೆಯ ಮೇಲೆ ಕಾಲೂರಿದ ಅನುಭವ ಕೊಡುತ್ತಿತ್ತು. ಅದಕ್ಕೆ ತಕ್ಕಂತೆ ಸ್ಟಿರಿಯೋಫೋನಿಕ್ ಸೌಂಡ್, ಚಿತ್ರ ನೋಡುವ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಅದು ಪ್ರೇಕ್ಷಕರಲ್ಲಿ ಉಂಟು ಮಾಡಿದ ಪರಿಣಾಮ ಭಿನ್ನವಾಗಿತ್ತು.
ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ
ಈ ಮಟ್ಟದ ಥ್ರಿಲ್ ಮತ್ತು ತಂತ್ರಜ್ಞತೆಯನ್ನು ಭಾರತೀಯ ಚಿತ್ರಗಳಿಗೂ ತರಬೇಕೆಂಬುದು ರಮೇಶ್ ಸಿಪ್ಪಿಯ ಆಸೆಯಾಗಿತ್ತು. ಆದರೆ ಅದು ದುಬಾರಿ ಆಸೆಯಾಗಿತ್ತು. ಆ ಕಾಲಕ್ಕೇ ಅತಿಹೆಚ್ಚು ಎನಿಸುವ ಭಾರೀ ಬಂಡವಾಳ ಬೇಡುತ್ತಿತ್ತು. ಅದು 3 ಕೋಟಿ ರೂಪಾಯಿಗಳ ಸಿನಿಮೀಯ ಜೂಜಾಟವಾಗಿತ್ತು. ಸಿಪ್ಪಿ ಆಸೆಯಂತೆ ಇಡೀ ಚಿತ್ರವನ್ನು ಚಿತ್ರೀಕರಿಸಲು ಮುಂದಾದರೆ, ಫಿಲ್ಮ್, ಕ್ಯಾಮರಾ, ಸಂಸ್ಕರಣ, ಚಿತ್ರೀಕರಣ ಎಲ್ಲವೂ ಎರಡುಪಟ್ಟು ವೆಚ್ಚ ಬೇಡುತ್ತಿತ್ತು. ಜೊತೆಗೆ 70 ಎಂಎಂ ಚಿತ್ರವನ್ನು ಪ್ರದರ್ಶಿಸುವ ಥಿಯೇಟರ್‍ಗಳೂ ಇರಲಿಲ್ಲ. ಆದರೂ, ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬ ತಂತ್ರಜ್ಞರೂ, ಸಿಪ್ಪಿಯವರ ಆಸೆಗೆ ಪೂರಕವಾಗಿ ದುಡಿದರು. 35 ಎಂಎಂ ಮತ್ತು 70 ಎಂಎಂ- ಎರಡೆರಡು ಫಿಲ್ಮ್ ಬಳಸಿ ಎರಡೆರಡು ಸಲ ಚಿತ್ರೀಕರಿಸಿದರು. ಎರಡನ್ನೂ ಸಿದ್ಧವಾಗಿಟ್ಟುಕೊಂಡರು. ಚಿತ್ರ ಬಿಡುಗಡೆಯ ಸಂದರ್ಭಕ್ಕೆ ಸರಿಯಾಗಿ ಬಾಂಬೆಯ ಮಿನರ್ವ ಥಿಯೇಟರ್ ಅವರಂದುಕೊಂಡಂತೆಯೇ ಸಿದ್ಧವಾಗಿತ್ತು. ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡುಹೋಗಿತ್ತು.
ಮೂರು ಗಂಟೆಗಳ ದೀರ್ಘಾವಧಿಯ ‘ಶೋಲೆ’ ಬಿಡುಗಡೆಯಾದ ದಿನ ಚಿತ್ರ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ನೀರಸವಾಗಿತ್ತು. ಪ್ರೇಕ್ಷಕರ ಮುಖಭಾವ ಚಿತ್ರದ ನಿರ್ಮಾಪಕರ ಹಣೆಬರಹ ಬರೆಯುವಂತಿತ್ತು. ಆದರೆ, ದಿನ ಕಳೆದಂತೆ, ಚಿತ್ರದ ಡೈಲಾಗ್‌ಗಳು, ತುಣುಕುಗಳು, ಹಾಡುಗಳು ಬಾಯಿಂದ ಬಾಯಿಗೆ ಹರಿದಾಡತೊಡಗಿದವು. ನೋಡು ನೋಡುತ್ತಿದ್ದಂತೆ ಥಿಯೇಟರ್‌ಗಳು ತುಂಬತೊಡಗಿದವು. ದೇಶದಾದ್ಯಂತ ಬಿಡುಗಡೆಯಾದ 100 ಥಿಯೇಟರ್‌ಗಳಲ್ಲಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿತು. ಮಿನರ್ವ ಚಿತ್ರಮಂದಿರದಲ್ಲಿ ಸತತವಾಗಿ ಮೂರು ವರ್ಷ ಮತ್ತು ಮಧ್ಯಾಹ್ನದ ಮ್ಯಾಟಿನಿ ಶೋನಲ್ಲಿ ಎರಡು ವರ್ಷ ಓಡಿ ದಾಖಲೆ ನಿರ್ಮಿಸಿತು. ಅಷ್ಟೇ ಅಲ್ಲ, ಹತ್ತು ವರ್ಷ ಪ್ರದರ್ಶನ ಕಂಡ ಭಾರತೀಯ ಏಕಮಾತ್ರ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಇದೆಲ್ಲವನ್ನು ಕಂಡ ಚಿತ್ರನಿರ್ದೇಶಕ ಶೇಖರ್ ಕಪೂರ್, ‘ಭಾರತೀಯ ಪರದೆಯ ಮೇಲೆ ಇದಕ್ಕಿಂತ ಹೆಚ್ಚು ನಿರ್ಣಾಯಕ ಚಿತ್ರ ಎಂದಿಗೂ ಬಂದಿಲ್ಲ. ಭಾರತೀಯ ಚಲನಚಿತ್ರ ಇತಿಹಾಸವನ್ನು ‘ಶೋಲೆ BC’ ಮತ್ತು ‘ಶೋಲೆ AD’ ಎಂದು ವಿಂಗಡಿಸಬಹುದು’ ಎಂದು ಹೇಳಿರುವುದು ಸೂಕ್ತವೂ ಸಶಕ್ತವೂ ಆದ ವ್ಯಾಖ್ಯಾನವಾಗಿದೆ.
ಇದನ್ನು ಓದಿದ್ದೀರಾ?: ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ಇಂತಹ ಶೋಲೆಗೆ ಈ ಆಗಸ್ಟ್ 15ಕ್ಕೆ ಬರೋಬ್ಬರಿ 50 ವರ್ಷಗಳು. ಇವತ್ತಿಗೂ ನೋಡುವಂತಹ, ಮೆಚ್ಚುವಂತಹ, ಮೆಲುಕು ಹಾಕುವಂತಹ ಗುಣ ಪಡೆದಿರುವ ಶೋಲೆಯಲ್ಲಿ ಏನಿಲ್ಲ- ಆ್ಯಕ್ಷನ್, ಫನ್, ಡ್ರಾಮಾ, ಕಾಮಿಡಿ, ರೋಮಾನ್ಸ್, ಎಮೋಷನ್ಸ್ ಎಲ್ಲವೂ ಒಂದೇ ಚಿತ್ರದಲ್ಲಿ. ಹಾಗೆ ನೋಡಿದರೆ ಚಿತ್ರಕ್ಕೆ ಕತೆಯೇ ಸ್ಟಾರ್; ಜೊತೆಗೆ ರಿಯಲ್ ಸ್ಟಾರ್‌ಗಳು ಹತ್ತಾರು. ಅವರ ನಟನೆ- ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದವರಂತೆ, ಪಾತ್ರವನ್ನು ಮೈಮೇಲೆ ಆವಾಹಿಸಿಕೊಂಡಂತೆ, ಅವರು ಅವರಾಗದೆ- ಠಾಕೂರ್, ವೀರು, ಜಯ್, ಬಸಂತಿ, ಗಬ್ಬರ್‌ಸಿಂಗ್, ರಾಧ, ಸಾಂಭ- ಮತ್ತೊಂದು ಜನ್ಮವೆತ್ತಿ ಬಂದಂತೆ ಬದುಕಿದ್ದಾರೆ. ಅದೂ ಎಲ್ಲಿ, ನಮ್ಮದೇ ರಾಮನಗರದ ಹತ್ತಿರದ ಕಲ್ಲು ಬಂಡೆಗಳ ನಡುವಿನಲ್ಲಿ, ಶೋಲೆ ಚಿತ್ರಕ್ಕಾಗಿಯೇ ಸೃಷ್ಟಿಸಿದ ರಾಮ್‌ಗಡ್‌ನಲ್ಲಿ. ಈ ರಾಮ್‌ಗಡ್ ಶೋಲೆಯ ನಿರ್ದೇಶಕ ರಮೇಶ್ ಸಿಪ್ಪಿಯವರ ಸೃಷ್ಟಿ, ಅವರ ನೆನಪಿಗಾಗಿ ಇಂದು ಅದು ಸಿಪ್ಪಿನಗರವಾಗಿದೆ. ಗಬ್ಬರ್ ಸಿಂಗ್ ಪಾತ್ರ ಮಾಡಿದ ಅಮ್ಜದ್ ಖಾನ್‌ನನ್ನು ದಿನಬೆಳಗಾಗುವುದರೊಳಗೆ ಸ್ಟಾರ್ ಮಾಡಿದ್ದು, ಆತ ಬ್ಯುಸಿ ಖಳನಾಯಕನಾಗಿ ಮಿಂಚಿದ್ದು, ಮೆರೆಯುತ್ತಲೇ ಮರೆಯಾಗಿಹೋದದ್ದು… ಒಂದೇ ಎರಡೇ?

ಶೋಲೆ ಚಿತ್ರ ಇಂತಹ ನೂರಾರು ದಂತಕತೆಗಳನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ಚಿತ್ರ ತಯಾರಿಕೆಯ ಹಂತದಲ್ಲಿಯೇ ಇಂತಹುದ್ದೇ ಇನ್ನಷ್ಟು ಸ್ವಾರಸ್ಯಕರ ಸಂಗತಿಗಳಿಗೂ, ಘಟನೆಗಳಿಗೂ ಕಾರಣವಾಗಿತ್ತು ಎಂಬ ಸುದ್ದಿಗಂತೂ ಈಗಲೂ ಜೀವವಿದೆ.
ಶೋಲೆ ಚಿತ್ರವನ್ನು ಮೊದಲಿಗೆ ಮನಮೋಹನ್ ದೇಸಾಯಿ ನಿರ್ದೇಶಿಸಬೇಕಾಗಿತ್ತು. ಚಿತ್ರಕತೆ ಮಾಡುತ್ತಿದ್ದ ಜಾವೇದ್ ಅಖ್ತರ್ ಮತ್ತು ಸಲೀಮ್ ಖಾನ್‌ಗೆ ದೇಸಾಯಿ ಸಲಹೆ, ಸೂಚನೆಗಳನ್ನೂ ಕೊಟ್ಟಾಗಿತ್ತು. ಆದರೆ, ದೇಸಾಯಿ ಬೇರೊಂದು ಚಿತ್ರದಲ್ಲಿ ಬ್ಯುಸಿಯಾಗಿ, ಡೇಟ್ಸ್ ಹೊಂದಾಣಿಕೆಯಾಗದಿದ್ದಾಗ, ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಯಾದವರು ರಮೇಶ್ ಸಿಪ್ಪಿ.
ಜಯ್ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಅವತ್ತಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಿದ್ದ ಶತ್ರುಘ್ನಸಿನ್ಹಾ. ಆದರೆ ಬಚ್ಚನ್ ನಿರ್ಮಾಪಕರಿಗೆ ದುಂಬಾಲು ಬಿದ್ದಿದ್ದರಿಂದ ಅದು ಅಮಿತಾಭ್ ಪಾಲಾಯಿತು.
ಚಿತ್ರದ ಹೈಲೈಟ್ ಎಂದು ಎಲ್ಲರೂ ಹೇಳುವ ಗಬ್ಬರ್ ಪಾತ್ರಕ್ಕೆ ಡ್ಯಾನಿ ಎಂದೇ ಎಲ್ಲರೂ ತೀರ್ಮಾನಿಸಿಯಾಗಿತ್ತು. ಆದರೆ ಆ ಪಾತ್ರ ಡ್ಯಾನಿಗೆ ಇಷ್ಟವಿರಲಿಲ್ಲ. ಜೊತೆಗೆ ಆತ ‘ಧರ್ಮಾತ್ಮ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ, ಎರಡನೆ ಆಯ್ಕೆ- ಸ್ಟ್ಯಾಂಡ್ ಬೈ ಎಂದು ಇಟ್ಟುಕೊಂಡಿದ್ದ ಹೆಸರೇ ಮೊದಲ ಆಯ್ಕೆಯಾಯಿತು. ಅದು ಅವತ್ತಿಗೆ ಇಂಡಸ್ಟ್ರಿಗೇ ಹೊಸಬನಾದ ಅಮ್ಜದ್ ಖಾನ್‌ದು.
ಸಂಭಾಷಣೆ ಬರೆಯುತ್ತಿದ್ದ ಜಾವೆದ್ ಅಖ್ತರ್ ನಿಜವಾದ ಗಬ್ಬರ್‌ನ ಸೃಷ್ಟಿಕರ್ತರು. ಅವರ ತಲೆಯಲ್ಲಿದ್ದ ಗಬ್ಬರ್ ಸಿಂಗೇ ಬೇರೆ, ಆಯ್ಕೆಯಾಗಿದ್ದ ಗಬ್ಬರ್ ಸಿಂಗೇ ಬೇರೆ. ಅದು ಅವರಿಗೆ ಸರಿ ಎನಿಸಲಿಲ್ಲ. ‘ಈತ ನನ್ನ ಗಬ್ಬರ್ ಅಲ್ಲ, ಆ ಗಡುಸು ಧ್ವನಿ ಈತನಿಗಿಲ್ಲ, ಆ ಪಾತ್ರಕ್ಕೆ ಈತ ಸೂಟ್ ಆಗಲ್ಲ, ಕೈಬಿಡಿ’ ಎಂದಿದ್ದರಂತೆ. ಆದರೂ ರಮೇಶ್ ಸಿಪ್ಪಿಗೆ ಅಮ್ಜದ್ ಖಾನ್ ಮೇಲೆ ಅದೇನೋ ನಂಬಿಕೆ, ನಿರೀಕ್ಷೆ. ಅವರ ದಿಟ್ಟ ನಡಿಗೆ, ದಪ್ಪ ಮುಖ, ಗುಂಗುರು ಕೂದಲು, ಒರಟು ನೋಟ- ಇವನೇ ಅವನು ಎಂದು ನಿರ್ಧರಿಸಿದ್ದರು. ಹಾಗೆ ನೋಡಿದರೆ, ಗಬ್ಬರ್ ಪಾತ್ರ ಸಾಮಾನ್ಯ ಪಾತ್ರವಲ್ಲ. ಅದು ಹಲವು ಸ್ಟಾರ್ ನಟರ ಮುಂದಿನ ಸವಾಲಿನ ಪಾತ್ರ. ತನ್ನನ್ನು ತಾನು ಉಳಿಸಿಕೊಳ್ಳುವ, ಎದುರಿನವರ ಗೆಲ್ಲುವ, ಪ್ರತಿಭೆ ಮತ್ತು ವರ್ಚಸ್ಸು ಎರಡನ್ನೂ ನಿಕಷಕ್ಕೆ ಒಡ್ಡುವ ಪಾತ್ರವಾಗಿತ್ತು. ಎಲ್ಲರ ನಿರೀಕ್ಷೆಯನ್ನು ಮೀರಿ ಗಬ್ಬರ್ ಗೆದ್ದಿದ್ದರು. ಸಿಪ್ಪಿ, ಅಮ್ಜದ್ ಖಾನ್‌ನನ್ನೇ ಗಬ್ಬರ್‌ನನ್ನಾಗಿ ಮಾಡಿ ಚಿತ್ರರಸಿಕರ ಮನ ಗೆದ್ದುಬಿಟ್ಟರು.
ಹಾಗೆಯೇ ಠಾಕೂರ್ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಧರ್ಮೇಂದ್ರ. ವೀರು ಪಾತ್ರಕ್ಕೆ ಸಂಜೀವ್ ಕುಮಾರ್. ಅಂದಮೇಲೆ ವೀರು ಲವರ್ ಆದ ಬಸಂತಿ ಪಾತ್ರ ಮಾಡಬೇಕಾಗಿದ್ದು ಹೇಮಾಮಾಲಿನಿ. ಆದರೆ, ಅದೇ ಸಮಯದಲ್ಲಿ ಸಂಜೀವ್ ಕುಮಾರ್, ಹೇಮಾಮಾಲಿನಿಯನ್ನು ಮದುವೆಯಾಗುವುದಾಗಿ ಆಸೆಪಟ್ಟು ಇನ್ನೊಬ್ಬರ ಮೂಲಕ ಕೇಳಿಸಿದ್ದರಂತೆ. ಇದರಿಂದ ಕುಪಿತಗೊಂಡ ಹೇಮಾಮಾಲಿನಿ ಆತನೆದುರು ನಟಿಸಲ್ಲ ಎಂದು ಸೆಟಗೊಂಡಿದ್ದರಂತೆ. ಅಷ್ಟೇ ಅಲ್ಲ, ಅದೇ ಸಮಯದಲ್ಲಿ ಧರ್ಮೇಂದ್ರ-ಹೇಮಾಮಾಲಿನಿಯರ ಪ್ರೀತಿ-ಪ್ರೇಮ ಕೂಡ ಉತ್ತುಂಗದಲ್ಲಿತ್ತು. ಇದನ್ನೆಲ್ಲ ಅಳೆದು ಸುರಿದ ನಿರ್ದೇಶಕ ರಮೇಶ್ ಸಿಪ್ಪಿ ವೀರು-ಬಸಂತಿ ಪಾತ್ರಗಳಿಗೆ ಇವರಿಬ್ಬರೇ ಸರಿ ಎನ್ನಿಸಿ, ಠಾಕೂರ್ ಪಾತ್ರಕ್ಕೆ ಸಂಜೀವ್ ಕುಮಾರ್‌ರನ್ನು ಫಿಕ್ಸ್ ಮಾಡಿದರಂತೆ.
ಆಶ್ಚರ್ಯವೆಂದರೆ, ಇಡೀ ಚಿತ್ರದಲ್ಲಿ ಎಲ್ಲೂ ಹೇಮಾಮಾಲಿನಿ ಮತ್ತು ಸಂಜೀವ್ ಕುಮಾರ್ ಒಂದೇ ಫ್ರೇಂನಲ್ಲಿ ಬರುವುದೇ ಇಲ್ಲ. ಜೊತೆ ಜೊತೆಯಾಗಿ ನಟಿಸುವ ಸಂದರ್ಭವೂ ಸೃಷ್ಟಿಯಾಗುವುದಿಲ್ಲ. ಇದೆಲ್ಲ ನಿರ್ದೇಶಕ ರಮೇಶ್ ಸಿಪ್ಪಿಯ ಕೈಚಳಕ ಎನ್ನದೇ ವಿಧಿಯಿಲ್ಲ.
ಸಿಕ್ಕಾಪಟ್ಟೆ ಕುಡಿದ ವೀರು ಹಳ್ಳಿಯ ನೀರಿನ ಟ್ಯಾಂಕ್ ಮೇಲೆ ಹತ್ತಿ, ತನ್ನ ಪ್ರೀತಿಯ ಬಸಂತಿಯಲ್ಲಿ ಪ್ರೇಮಭಿಕ್ಷೆ ಬೇಡುತ್ತ, ಆಕೆ ಮದುವೆಯಾಗುವುದಾಗಿ ಒಪ್ಪಿಕೊಂಡರೆ ಟ್ಯಾಂಕ್‌ನಿಂದ ಕೆಳಗಿಳಿಯುವುದಾಗಿ, ಇಲ್ಲದಿದ್ದರೆ ಅಲ್ಲಿಂದ ಬಿದ್ದ ಸಾಯುವುದಾಗಿ ಅಲ್ಲಿಂದಲೇ ಕೂಗುವ ದೃಶ್ಯವೊಂದಿದೆ. ಅದು ರಮೇಶ್ ಸಿಪ್ಪಿ ಕಂಡು ಕೇಳಿದ್ದ ನಿಜಘಟನೆಯಂತೆ. ಅದನ್ನೇ ಅವರು ತಮ್ಮ ಚಿತ್ರದ ಒಂದು ಸನ್ನಿವೇಶವನ್ನಾಗಿ ಮಾಡಿಕೊಂಡಿದ್ದರು.
ಚಿತ್ರದ ಕ್ಲೈಮ್ಯಾಕ್ ಸೀನ್‌ನಲ್ಲಿ, ಅತ್ತ ಕಡೆಯಿಂದ ಗಬ್ಬರ್‌ನ ಸಿಡಿಗುಂಡುಗಳು, ಇತ್ತ ಕಡೆಯಿಂದ ವೀರು-ಜಯ್‌ಗಳ ಗುಂಡುಗಳು ಸಿಡಿಯುತ್ತಿದ್ದವು. ವೀರು ಹಾರಿಸಿದ ಒಂದು ಗುಂಡು ಬಚ್ಚನ್‌ರನ್ನು ಬಲಿತೆಗೆದುಕೊಳ್ಳುವುದರಲ್ಲಿತ್ತು. ಧರ್ಮೇಂದ್ರನ ಗುಂಡಿನಿಂದ ಬಚ್ಚನ್ ಕೆಲವೇ ಇಂಚುಗಳ ಅಂತರದಲ್ಲಿ ಬಚಾವಾಗಿದ್ದರು.
ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ
ಗಬ್ಬರ್‌ನ ಫೇಮಸ್ ಡೈಲಾಗ್ ‘ಅರೆ ಓ ಸಾಂಭ… ಕಿತನೇ ಗೋಲಿ…’, ‘ಜೋ ಡರ್ ಗಯಾ, ಸಂಜೋ ಮರ್ ಗಯಾ…’ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಎಲ್ಲರ ನಾಲಗೆಯ ಮೇಲೂ ನಲಿದಾಡುತ್ತಿತ್ತು. ಅಷ್ಟೇ ಅಲ್ಲ, ಕೆಲ ಚಿತ್ರನಿರ್ಮಾಪಕರಲ್ಲಿ ‘ಅರೆ ಓ ಸಾಂಭ’ ಎಂಬ ಡೈಲಾಗನ್ನೇ ಚಿತ್ರದ ಹೆಸರನ್ನಾಗಿ ಮಾಡಲು ಪ್ರೇರೇಪಿಸಿತ್ತು. ಆ ಪವರ್ ಫುಲ್ ಡೈಲಾಗ್ ಆ ಕಾಲಕ್ಕಲ್ಲ, ಈ ಕಾಲಕ್ಕೂ ಜನಪ್ರಿಯ ಡೈಲಾಗ್ ಆಗಿಯೇ ಚಾಲ್ತಿಯಲ್ಲಿದೆ. ಮೀಮ್ಸ್, ಟ್ರೋಲ್, ಕಾಮಿಡಿಗಳಿಗೆ ಬಳಕೆಯಾಗುತ್ತಿದೆ. ಹೊಸ ಆವಿಷ್ಕಾರವಾದ ಎಐನಲ್ಲೂ ಅದು ಕಾಣಿಸಿಕೊಂಡಿದೆ.

ಹೀಗೆ ಚಿತ್ರ ಬಿಡುಗಡೆಯಾಗಿ 50 ವರ್ಷಗಳಾದರೂ ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲವನ್ನು ಉಳಿಸಿಕೊಂಡಿರುವ, ಬದಲಾದ ಜಗತ್ತನ್ನು, ಹೊಸ ಜಗತ್ತಿನ ಜನರ ಮನವನ್ನು ಗೆಲ್ಲುತ್ತಲೇ ಸಾಗಿರುವ ಶೋಲೆಗೊಂದು… ಸಲಾಮ್!

ಲೇಖಕ, ಪತ್ರಕರ್ತ