‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್‌ಎಫ್‌ಜೆ) ಮತ್ತು ಅದರ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ತನಿಖೆಯಲ್ಲಿ ‘ಹೊಸ ಪುರಾವೆ’ ದೊರೆತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆ ಪುರಾವೆಗಳನ್ನು ಉಲ್ಲೇಖಿಸಿ ‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್‌ಎಫ್‌ಜೆ)ಅನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ [ಯುಎಪಿಎ]-1967ರ ಅಡಿಯಲ್ಲಿ ಇನ್ನೂ ಐದು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.
ಎಸ್‌ಎಫ್‌ಜೆ ಮತ್ತು ಯುಎಸ್ ಪ್ರಜೆ ಪನ್ನೂನ್ ವಿರುದ್ಧ ದಾಖಲಾಗಿರುವ 6ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. ಕಳೆದ ವರ್ಷ ಪಂಜಾಬ್ ಮತ್ತು ಚಂಡೀಗಢದಲ್ಲಿ ಪನ್ನೂನ್ ಆಸ್ತಿಯನ್ನು ಎನ್‌ಐಎ ಜಪ್ತಿ ಮಾಡಿದೆ. ಎಸ್‌ಎಫ್‌ಜೆಅನ್ನು ಮೊದಲ ಬಾರಿಗೆ 2019ರ ಜುಲೈ 10ರಂದು ಯುಎಪಿಎ ಅಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಪನ್ನುನ್ ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಮತ್ತು ತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬೆದರಿಕೆ ಬೆದರಿಕೆ ತಂತ್ರಗಳ ಮೂಲಕ ಪಂಜಾಬ್ ಮತ್ತು ಭಾರತದ ಇತರ ಭಾಗಗಲ್ಲಿ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ ಎಂದು ಎನ್ಐಎ ಹೇಳಿದೆ.
“ಎನ್‌ಐಎ ತನಿಖೆಗಳು ಪನ್ನುನ್ ವಿರುದ್ಧದ ಆರೋಪಗಳ ಬಗ್ಗೆ ಮತ್ತಷ್ಟು ಪುರಾವೆಗಳನ್ನು ಬಹಿರಂಗಪಡಿಸಿವೆ. ಪನ್ನುನ್ ಅವರ ‘ಸಿಖ್ಸ್ ಫಾರ್ ಜಸ್ಟೀಸ್’ ಸಂಘಟನೆ ಯುವಕರನ್ನು ಭಯೋತ್ಪಾದಕ ಅಪರಾಧ ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರಚೋದಿಸಲು ಸೈಬರ್ ವೇದಿಕೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬುದನ್ನು ಗುರುತಿಸಿದೆ” ಎಂದು ಸರ್ಕಾರ ಹೇಳಿದೆ.
“ಪನ್ನುನ್ ಅವರು ಎಸ್‌ಎಫ್‌ಜೆಯ ನಿಯಂತ್ರಕರಾಗಿದ್ದರು. ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಗೆ ಸವಾಲೆಸೆಯುವ ಸ್ವತಂತ್ರ ಖಲಿಸ್ತಾನ್ ರಾಜ್ಯಕ್ಕಾಗಿ ಹೋರಾಡಲು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪಂಜಾಬ್ ಮೂಲದ ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಅಲ್ಲದೆ, ಪನ್ನುನ್ ಸಾರ್ವಜನಿಕ ವೇದಿಕೆಗಳಲ್ಲಿ ಹಿರಿಯ ಭಾರತೀಯ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ” ಎಂದು ಎನ್ಐಎ ಹೇಳಿದೆ.
‘Sikhs for Justice’ banned under UAPA for five more years. pic.twitter.com/n5N13nnpt4
— Arvind Gunasekar (@arvindgunasekar) July 9, 2024
“2022ರ ಏಪ್ರಿಲ್‌ನಲ್ಲಿ ಪಂಜಾಬ್‌ನಲ್ಲಿ ಜರ್ಮನಿ ಮೂಲದ ಜಸ್ವಿಂದರ್ ಸಿಂಗ್ ಅಲಿಯಾಸ್ ಮುಲ್ತಾನಿ ಆಯೋಜಿಸಿದ್ದ ‘ಮಾಡೆಲ್ ಜೈಲ್ ಟಿಫಿನ್ ಬಾಂಬ್ ಪ್ರಕರಣ’ದಲ್ಲಿ ಎಸ್‌ಎಫ್‌ಜೆ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ನಿಷೇಧಿತ ಎಸ್‌ಎಫ್‌ಜೆ ಸದಸ್ಯ ಮುಲ್ತಾನಿ ಭಾರತ, ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ ಖಲಿಸ್ತಾನ್ ಪರ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾನೆ. ಯುವಕರನ್ನು ಹಿಂಸೆ ಮತ್ತು ಭಯೋತ್ಪಾದನೆ ನಡೆಸುವಂತೆ ಪ್ರಚೋದಿಸಿದ್ದಾನೆ” ಎಂದು ಎನ್‌ಐಎ ಮೂಲಗಳು ಹೇಳಿವೆ.
ಎನ್‌ಐಎ ತನಿಖೆಯ ಪ್ರಕಾರ ಮುಲ್ತಾನಿ ಮತ್ತು ಪನ್ನುನ್ ಸಾಮಾಜಿಕ ಮಾಧ್ಯಮಗಳ ಮೂಲಕ ಪಂಜಾಬ್‌ನ ಯುವಕರನ್ನು ಗುರುತಿಸುವುದು, ಪ್ರೇರೇಪಿಸುವುದು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ನೇಮಿಸುವ ಕೆಲಸ ಮಾಡುತ್ತಿದ್ದರು. ಅವರು ಯುವಕರಿಗೆ ಹಣವನ್ನು ಕಳುಹಿಸುತ್ತಿದ್ದರು/ಸಂಗ್ರಹಿಸುತ್ತಿದ್ದರು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರವಾನಿಸುತ್ತಿದ್ದರು. ಜೊತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಸ್ಫೋಟಕಗಳನ್ನು ಸಾಗಣೆ ಮಾಡುತ್ತಿದ್ದರು ಎಂದು ಹೇಳಿದೆ.
ಈ ನಡುವೆ, ನಿಕ್ ಎಂದು ಕರೆಯಲ್ಪಡುವ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರನ್ನು ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಯಿತು. ಕಳೆದ ತಿಂಗಳು (ಜೂನ್) 14 ರಂದು ಪನ್ನುನ್‌ನನ್ನು ಕೊಲ್ಲುವ ಸಂಚು ರೂಪಿಸಿ ನಿಕ್‌ನನ್ನು ಅಮೆರಿಕಗೆ ಕಳಿಸಲಾಗಿತ್ತು. ಈ ಸಂಚಿನಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಗಳ ಪಾತ್ರವೂ ಇದೆ ಎಂದು ಅಮೆರಿಕ ನ್ಯಾಯ ಇಲಾಖೆ ಆರೋಪಿಸಿದೆ.