ದೇಶದಲ್ಲಿರುವ ‘ಕಾಕ್ರೋಚ್’ಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಾಜಿ ಸಂಸದೆ, 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಜ್ಞಾ ಸಿಂಗ್, “ಹಿಂದೆ ಜಿರಳೆಗಳು ಕಂಡರೆ ಪೊರಕೆಯಿಂದ ಹೊಡೆದು ಹೊರಗೆ ಎಸೆಯಲಾಗುತ್ತಿತ್ತು. ಆದರೆ, ಈಗ ಪೊರಕೆಯೇ ಜಿರಳೆಗಳೊಂದಿಗೆ ಸ್ನೇಹ ಮಾಡಿಕೊಂಡಿದೆ. ಹೀಗಾಗಿ, ದೇಶದಲ್ಲಿ ಗಲೀಜು ಹರಡುತ್ತಿದೆ. ಆದ್ದರಿಂದ ದೇಶದ ನಾಯಕರು ಇನ್ನು ಮುಂದೆ ಪೊರಕೆಯನ್ನು ನಂಬಬಾರದು. ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ವ್ಯವಸ್ಥೆ ಮಾಡಬೇಕು. ದೇಶವನ್ನು ಸ್ವಚ್ಛಗೊಳಿಸಬೇಕು” ಎಂದು ವಿವಾದಾತ್ಮಕವಾಗಿ ಬರೆದಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಪರೀಕ್ಷಾ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.
ಪ್ರತಿಭಟನೆಯ ಪ್ರಮುಖ ಮುಖವಾಗಿದ್ದ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ಕೇಂದ್ರ ಸರ್ಕಾರದಿಂದ ಕೆಲವು ಭರವಸೆಗಳು ದೊರೆತ ಹಿನ್ನೆಲೆಯಲ್ಲಿ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಸಿಜೆಪಿ ನಾಯಕರೊಂದಿಗೆ ಕೇಂದ್ರ ಸಚಿವ ಜೆ.ಪಿ ನಡ್ಡಾ ಸಭೆ ನಡೆಸಿದ್ದಾರೆ. ಸಿಜೆಪಿ ನಾಯಕರು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸರ್ಕಾರವು ಶನಿವಾರದ ವರೆಗೆ ಸಮಯ ಕೇಳಿದೆ.
ಈ ಲೇಖನ ಓದಿದ್ದೀರಾ?: ಜೆನ್ ಝೀʼ | ಇದು ಹಣೆಪಟ್ಟಿಗಳ ಸೀಳಿ ಟಿಸಿಲೊಡೆದ ಹೊಸ ಪೀಳಿಗೆ!
ಇಷ್ಟೆಲ್ಲ ನಡೆಯುತ್ತಿರುವ ಸಮಯದಲ್ಲಿಯೇ, ವಿವಾದಾತ್ಮಕ ಹೇಳಿಕೆಗಳು ಮತ್ತು ಆರೋಪಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಪ್ರಜ್ಞಾ ಸಿಂಗ್ ಠಾಕೂರ್, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಜ್ಞಾ ಸಿಂಗ್ ಈ ಹಿಂದೆಯೂ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದರು. 2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ 26/11 ಮುಂಬೈ ಉಗ್ರ ದಾಳಿಯಲ್ಲಿ ವೀರಮರಣ ಹೊಂದಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತು ಅವರು ನೀಡಿದ್ದ ಹೇಳಿಕೆ ದೇಶವ್ಯಾಪಿ ತೀವ್ರ ಟೀಕೆಗೆ ಗುರಿಯಾಗಿತ್ತು.
2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ 2025ರಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯದಿಂದ ಖುಲಾಸೆ ದೊರೆತಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅವರಿಗೆ ಮರು ಟಿಕೆಟ್ ನೀಡಿರಲಿಲ್ಲ.




