ಖ್ಯಾತ ಶಿಕ್ಷಣ ಸುಧಾರಕ, ಸಾಮಾಜಿಕ ಹೋರಾಟಗಾರ, ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಶುಕ್ರವಾರ 20ನೇ ದಿನಕ್ಕೆ ಕಾಲಿಟ್ಟಿದೆ. ತೀವ್ರವಾಗಿ ಕ್ಷೀಣಿಸುತ್ತಿರುವ ತಮ್ಮ ಆರೋಗ್ಯದ ನಡುವೆಯೂ ಹೋರಾಟದಿಂದ ಹಿಂದೆ ಸರಿಯಲು ವಾಂಗ್ಚುಕ್ ನಿರಾಕರಿಸಿದ್ದಾರೆ. ಉಪವಾಸ ಮುಂದುವರೆಸಿದ್ದಾರೆ. ಮುಂಬರುವ ಜುಲೈ 20ರಂದು ನಿಗದಿಯಾಗಿರುವ ಸಂಸತ್ ಚಲೋ ಮೆರವಣಿಗೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸೋನಮ್, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಹಾಸ್ಯ ಪ್ರಜ್ಞೆಯೊಂದಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಜುಲೈ 20ರಂದು ನಿಮ್ಮೆಲ್ಲರೊಂದಿಗೆ ಸಂಸತ್ತಿನತ್ತ ಮೆರವಣಿಗೆ ನಡೆಸಲು ನಾನು ಯಾವುದೇ ರೀತಿಯಲ್ಲಾದರೂ ಅಂದಿನವರೆಗೆ ಜೀವಂತವಾಗಿರುತ್ತೇನೆ. ಒಂದು ವೇಳೆ ಜುಲೈ 20ರ ನಮ್ಮ ಈ ಮೆರವಣಿಗೆ ಏನಾದರೂ ಯಶಸ್ವಿಯಾಗದಿದ್ದರೆ, ನಾನು ಭೂತವಾಗಿ ಮರಳಿ ಬರುತ್ತೇನೆ!” ಎಂದು ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೆಂಬಲಿಗರಲ್ಲಿ ಹೊಸ ಸಂಚಲನ ಮೂಡಿಸಿದೆ.
ನೀಟ್ ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ ಕಳೆದ 25 ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಜೂನ್ 28ರಿಂದ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಾಂಗ್ಚುಕ್ ಅವರ ವಿಡಿಯೋಗಳು ಮತ್ತು ಹೇಳಿಕೆಗಳನ್ನು ಹಂಚಿಕೊಳ್ಳುತ್ತಿರುವ ಪ್ರತಿಭಟನಾಕಾರರು, “ಭಾರತ ಈಗ ಜಾಗೃತಗೊಳ್ಳುತ್ತಿದೆ” ಎಂದು ಅಭಿಯಾನ ಆರಂಭಿಸಿದ್ದಾರೆ.
ವಾಂಗ್ಚುಕ್ ಅವರ ಹೋರಾಟಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ ಯುವಜನರು, ಸಾಮಾಜಿಕ ಹೋರಾಟಗಾರರು ಹಾಗೂ ವಿಪಕ್ಷಗಳ ನಾಯಕರು ಸೋನಮ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರು ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸೋನಮ್ ವಾಂಗ್ಚುಕ್ ಅವರ ಕ್ಷೀಣಿಸುತ್ತಿರುವ ಆರೋಗ್ಯದ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಉದಾಸೀನತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ವಾಂಗ್ಚುಕ್ ಅವರ ದೈಹಿಕ ಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ ಮತ್ತು ಉಪವಾಸದಿಂದಾಗಿ ಅವರ ದೇಹದ ಪ್ರಮುಖ ಅಂಗಗಳು ವೈಫಲ್ಯ ಕಾಣುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸರ್ಕಾರವು ಕೇವಲ ನೀಟ್ ಪರೀಕ್ಷಾ ಅಕ್ರಮದಿಂದ ತೊಂದರೆಗೆ ಒಳಗಾದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಲಕ್ಷಿಸುತ್ತಿಲ್ಲ, ಬದಲಿಗೆ ದೇಶಕ್ಕಾಗಿ ಹೋರಾಡುತ್ತಿರುವ ವಾಂಗ್ಚುಕ್ ಅವರ ಪ್ರಾಣದೊಂದಿಗೂ ಆಟವಾಡುತ್ತಿದೆ” ಎಂದು ಪಿಣರಾಯಿ ವಿಜಯನ್ ಗಂಭೀರವಾಗಿ ಆರೋಪಿಸಿದ್ದಾರೆ.
“ಪರಿಸ್ಥಿತಿ ಕೈಮೀರುವ ಮುನ್ನವೇ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಬೇಕು ಮತ್ತು ವಾಂಗ್ಚುಕ್ ಅವರ ಜೀವ ಉಳಿಸಬೇಕು” ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



