ಮುಂದಿನ ನಾಲ್ಕೈದು ದಿನಗಳಲ್ಲಿ ನೈಋತ್ಯ ಮುಂಗಾರು ಕೇರಳ ತಲುಪುವ ಸಾಧ್ಯತೆ ಇದೆ. ಜೂನ್ ಒಂದಕ್ಕಿಂತ ಬಹಳ ಮುಂಚಿತವಾಗಿ ಮುಂಗಾರು ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಈ ಹಿಂದೆ ಮೇ 27ರ ವೇಳೆಗೆ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನಿರೀಕ್ಷೆಯಂತೆ ಮುಂಗಾರು ಆರಂಭವಾದರೆ ಈ ವರ್ಷವು ಅತೀ ಶೀಘ್ರ ಮುಂಗಾರು ಆರಂಭವಾದ ವರ್ಷವಾಗಲಿದೆ. ಈ ಹಿಂದೆ 2009ರ ಮೇ 23ರಂದು ಶೀಘ್ರ ಮುಂಗಾರು ಆರಂಭವಾಗಿತ್ತು ಎಂದು ಐಎಂಡಿ ದತ್ತಾಂಶ ತಿಳಿಸಿದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ; 18 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
“ಮುಂದಿನ 4-5 ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗುವ ಸಾಧ್ಯತೆಯಿದೆ” ಎಂದು ಐಎಂಡಿ ಮಂಗಳವಾರ ಮಧ್ಯಾಹ್ನ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಿದೆ.
ಸಾಮಾನ್ಯವಾಗಿ, ನೈಋತ್ಯ ಮುಂಗಾರು ಜೂನ್ 1ರ ವೇಳೆಗೆ ಕೇರಳವನ್ನು ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶದಲ್ಲಿ ಮುಂಗಾರು ಆರಂಭಿಸುತ್ತದೆ. ಸೆಪ್ಟೆಂಬರ್ 17ರ ಸುಮಾರಿಗೆ ವಾಯುವ್ಯ ಭಾರತದಿಂದ ಮುಂಗಾರು ಅಂತ್ಯವಾಗುತ್ತಾ ಸಾಗುತ್ತದೆ. ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಮುಂಗಾರು ಕೊನೆಯಾಗುತ್ತದೆ.
ಕಳೆದ ವರ್ಷ ಮೇ 30ರಂದು ದಕ್ಷಿಣ ರಾಜ್ಯದ ಮೇಲೆ ಮುಂಗಾರು ಪ್ರವೇಶಿಸಿದೆ. 2023ರಲ್ಲಿ ಜೂನ್ 8, 2022ರಲ್ಲಿ ಮೇ 29, 2021ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 2019ರಲ್ಲಿ ಜೂನ್ 8 ಮತ್ತು 2018ರಲ್ಲಿ ಮೇ 29ರಂದು ಮುಂಗಾರು ಆರಂಭವಾಗಿದೆ.
2025ರ ಏಪ್ರಿಲ್‌ನಲ್ಲಿ ಐಎಂಡಿ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದೆ. ಎಲ್ ನಿನೊ ಪರಿಸ್ಥಿತಿಯನ್ನು ತಳ್ಳಿಹಾಕಿದೆ.
