ಇಡೀ ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರಾಜಕೀಯ ಪಕ್ಷ, ಖಾಸಗಿ ಸಂಸ್ಥೆಗಳು ಸೇರಿದಂತೆ ಇತರೆಡೆಗಳಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಗುತ್ತದೆ. ಆದರೆ ದನ ಕರುಗಳೊಂದಿಗೆ, ಕುರಿ ಆಡುಗಳೊಂದಿಗೆ ಮನೆ ಬಿಟ್ಟು ಊರಿಂದೂರಿಗೆ ಕಾಡುಮೇಡುಗಳಲ್ಲಿ ತಿರುಗುವ ಅಲೆಮಾರಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಭಾಗ್ಯ, ಅವಕಾಶ ಸಿಗಬೇಕು. ಅವರೂ ಕೂಡ ಸಂಭ್ರಮದ ಪಾಲುದಾರರಾಗಬೇಕು. ಅವರುಗಳು ಬಹುತೇಕ ಇಂತಹ ರಾಷ್ಟ್ರೀಯ ಹಬ್ಬಗಳಿಂದ ದೂರವೇ ಇರುತ್ತಾರೆ. ಆದರೆ ಇದಕ್ಕೆ ಅಪವಾದವೆಂಬಂತೆ ಚಿತ್ರದುರ್ಗದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕುರಿಗಾಹಿಗಳಿಂದ ಧ್ವಜಾರೋಹಣ ಮಾಡಿಸಿರುವುದು ವಿಶೇಷ ಸ್ವಾತಂತ್ರ್ಯ ದಿನಾಚರಣೆ ಎನಿಸಿದೆ. ಅಲ್ಲದೆ ಅವರೂ ಈ ಸಂಭ್ರಮದ ಹಕ್ಕುದಾರರು ಎಂದು ಸಮಾಜಕ್ಕೆ ನೆನಪು ಮಾಡಿಕೊಟ್ಟಿದೆ.
ಸಾಮಾನ್ಯವಾಗಿ ಗೋ-ಪಾಲಕರು, ಕುರಿಗಾಹಿಗಳು ಕುರಿಗಳ ಹಿಂಡುಗಳನ್ನು ನೋಡಿಕೊಂಡು ಊರೂರು ಕಾಡುಮೇಡುಗಳನ್ನು ಅಲೆದು ನೂರಾರು, ಸಾವಿರಾರು ಕಿಲೋಮೀಟರ್ ಅಲೆಯುತ್ತ, ವರ್ಷವಿಡೀ ಮನೆಯಿಂದ ಹೊರಗೆ ಕಾಡುಗಳಲ್ಲಿ ಸುತ್ತುತ್ತ ಅಲೆಮಾರಿಗಳಂತೆ ಜೀವನ ಸಾಗಿಸುತ್ತಾರೆ. ಅವರು ಮನೆಗೆ ಹೋಗುವುದೇ ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ. ಉಳಿದಂತೆ ಆಡು ಕುರಿಗಳ, ದನ ಕರುಗಳ ಜತೆಯೇ ಅವರ ಜೀವನದ ಬಹುಪಾಲು ಸಾಗಾಟ ನಡೆದಿರುತ್ತದೆ. ಇಂತಹ ಕುರಿಗಾಹಿಗಳಿಗೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಸಂವಿಧಾನ ಎಂದರೆ ಬಹುತೇಕ ಮರೀಚಿಕೆಯಾಗಿ ಹೋಗಿರುತ್ತದೆ. ಪಶುಗಳೇ ಅವರ ಜೀವನ ಸ್ವಾತಂತ್ರ್ಯ ಎಲ್ಲವೂ ಆಗಿರುತ್ತದೆ. ಇಂತಹ ಕುರಿಗಾಹಿಗಳಿಗೂ ಕೂಡ ಸ್ವಾತಂತ್ರ್ಯವನ್ನು ಆಚರಿಸುವ ಹಕ್ಕಿದೆ. ಸ್ವಾತಂತ್ರ್ಯದಲ್ಲಿ ಅವರೂ ಕೂಡ ಧ್ವಜಾರೋಹಣ ಮಾಡುವ ಹಕ್ಕಿದೆ. ಇದು ಪ್ರತಿಯೊಬ್ಬ ಭಾರತೀಯನ ಹಕ್ಕು. ಇದು ಅವರದ್ದು ಕೂಡ ಎನ್ನುವ ಉತ್ತಮ ನಿದರ್ಶನ ಚಿತ್ರದುರ್ಗದಲ್ಲಿ ಆಗಸ್ಟ್ 15ರಂದು ನಡೆಸಿದ ಧ್ವಜಾರೋಹಣದಲ್ಲಿ ವಿಶೇಷವೆನಿಸಿದೆ.

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಚಿತ್ರದುರ್ಗದ ಹೊರವಲಯದ ಧಮ್ಮ ಕೇಂದ್ರ, ವಿಮುಕ್ತಿ ವಿದ್ಯಾ ಸಂಸ್ಥೆ ಹಮ್ಮಿಕೊಂಡಿದ್ದ ಧ್ವಜಾರೋಹಣವನ್ನು ವಿಶೇಷವಾಗಿ ಕುರಿಗಾಹಿಗಳ ಮಧ್ಯೆ ಸಂಭ್ರಮಾಚರಣೆ ನಡೆಸಿ ಧ್ವಜಾರೋಹಣ ನೆರವೇರಿಸಲಾಗಿದೆ.
ಸಂಸ್ಥೆಯ ನಿರ್ದೇಶಕ ಆರ್ ವಿಶ್ವಸಾಗರ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಪ್ರತಿ ವರ್ಷವೂ ಭಾರತೀಯರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಆದರೆ ಸ್ವಾತಂತ್ರ್ಯವು ಬರಿ ಮನುಷ್ಯರಿಗೆ ಮಾತ್ರವಲ್ಲ, ಸ್ವಚ್ಛಂದವಾಗಿ ಹಾರಾಡುವ ಹಕ್ಕಿ ಪಕ್ಷಿಗಳು, ಸಾಕಿರುವ ನಾಯಿ, ಕುರಿ, ಕೋಳಿಗಳು ಮತ್ತು ಕಾಡಿನ ಪ್ರಾಣಿಗಳಿಗೂ ಆಚರಿಸುವ ಹಕ್ಕು ಇದೆ. ಈ ಹಿನ್ನೆಲೆಯಲ್ಲಿ ನಾವು ವಿಶೇಷವಾಗಿ ಪ್ರಕೃತಿ ಮಧ್ಯೆಯೇ ಬಹುಪಾಲು ಜೀವನ ಕಳೆಯುವ ಕುರಿಗಾಹಿಗಳ ಮಧ್ಯದಲ್ಲಿ ಅವರಿಂದಲೇ ಧ್ವಜಾರೋಹಣ ಮಾಡಿಸಿದ್ದೇವೆ. ಸ್ವಾತಂತ್ರ್ಯ ಅವರಿಗೂ ಕೂಡ ಇದ್ದು, ಅವರೂ ಇದರ ಹಕ್ಕುದಾರರು ಎಂದು ಅವರಿಗೆ, ಸಮಾಜಕ್ಕೆ ಮನವರಿಕೆಯಾಗಬೇಕಿದೆ” ಎಂದು ತಿಳಿಸಿದರು.
ಹಿರಿಯರಾದ ಕುರಿಗಾಹಿ ಓಬಯ್ಯ ಮಾತನಾಡಿ, “ಇದೇ ಮೊದಲ ಬಾರಿ ನಾನು ಧ್ವಜಾರೋಹಣ ಮಾಡಿರುವುದು ನಿಜಕ್ಕೂ ಖುಷಿ ಹಾಗೂ ಸಂತಸ ಉಂಟುಮಾಡಿದೆ. ಹಾಗೆ ಸ್ವಾತಂತ್ರ್ಯ ಭಾರತದಲ್ಲಿ ನಮ್ಮನ್ನು ಯಾರೂ ಲೆಕ್ಕಿಸುವುದಿಲ್ಲ, ಕೇಳುವುದಿಲ್ಲ. ನಾವು ಕುರಿಯ ಮಂದಿಯಲ್ಲಿ ನಾವೂ ಕೂಡ ಕುರಿಗಳು, ನಾವು ಒಬ್ಬರು ಎಂದು ನೋಡುವ ಈ ಕಾಲದಲ್ಲಿ ಧಮ್ಮ ಕೇಂದ್ರದವರು ನಮ್ಮನ್ನು ಸೇರಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದು, ತುಂಬಾನೇ ಆನಂದ ಉಂಟುಮಾಡಿದೆ. ಸ್ವಾತಂತ್ರ್ಯೋತ್ಸವದಲ್ಲಿ ಈ ಬಾರಿ ನಾವೂ ಕೂಡ ಒಬ್ಬರಾಗಿದ್ದೇವೆ” ಎಂದು ಸಂತೋಷ ವ್ಯಕ್ತಪಡಿಸಿದರು.
ಕುರಿಗಾಹಿ ಅಶೋಕ್ ಮಾತನಾಡಿ, “ನಮ್ಮ ಸಮಸ್ಯೆಗಳೇ ನಮಗೇ ಹೆಚ್ಚು ಎನಿಸುತ್ತದೆ. ಈ ಆಚರಣೆ ಬಗ್ಗೆ ಗೊತ್ತಿರುವುದಿಲ್ಲ. ಮಳೆಯಲ್ಲಿ ಕುರಿಗಳು ಕಾಯಿಲೆ ಬೀಳುವುದು, ಸರಿಯಾದ ಆಹಾರ ಸಿಗದೇ ಇರುವುದು, ಪ್ರಕೃತಿದತ್ತವಾಗಿ ಗುಡ್ಡ ಬೆಟ್ಟ, ದಾರಿ ಬದಿ, ಹುಲ್ಲುಗಾವಲು ಪ್ರದೇಶದಲ್ಲಿ ಬೆಳೆದಿರುವ ಮೇವುಗಳನ್ನು ಸ್ಥಳೀಯರು ಮೇಯಿಸಲು ಬಿಡದೆ ಅಡ್ಡಿ ಮಾಡುವುದು, ಕುಡಿಯುವ ನೀರು ಸಿಗದೆ ಇರುವುದು, ಇನ್ನು ಹಲವು ಸಮಸ್ಯೆಗಳಿರುತ್ತವೆ. ಅವುಗಳನ್ನು ಪರಿಹರಿಸಿಕೊಳ್ಳುವುದೇ ಆಗುತ್ತದೆ” ಎಂದು ಸಂಕಟ ವ್ಯಕ್ತಪಡಿಸಿದರು.

“ಇದರ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಖುಷಿಯಾಗಿದೆ. ಸ್ಥಳೀಯವಾಗಿ ವಿಮುಕ್ತಿ ವಿದ್ಯಾ ಸಂಸ್ಥೆಯು ತಮಗೆ ಆಶ್ರಯ ನೀಡಿ, ಕುಡಿಯಲು ನೀರು ಹಾಗೂ ಅಡುಗೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕೆ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದಕ್ಕೆ ಸಂತೋಷವಾಗಿದೆ” ಎಂದು ಧನ್ಯವಾದ ಅರ್ಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಲಿತ ಸಂಘಟನೆಗಳ ಒಳಮೀಸಲಾತಿ ಪ್ರತಿಭಟನೆ; ಎಸಿ ಕಛೇರಿಗೆ ಬೀಗ
ಒಟ್ಟಿನಲ್ಲಿ ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವ ಕುರಿಗಾಹಿಗಳು ಈ ಬಾರಿಯ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡು, ತಾವೂ ಕೂಡ ಇದರ ಭಾಗವಾಗಿದ್ದೇವೆಂದು ತಿಳಿದುಕೊಂಡಿರುವುದು ಒಂದು ಸಂತಸದ ವಿಷಯ. ಸ್ವಾತಂತ್ರ್ಯ ಬಂದಿತು ಎಂದೇಳಿ 78 ವರ್ಷಗಳೇ ಕಳೆದರೂ ಸಂಪೂರ್ಣ ಸ್ವಾತಂತ್ರ್ಯ ಸಿಗದ ಅನೇಕ ದಲಿತ, ದಮನಿತ, ಅಲೆಮಾರಿ ಸಮುದಾಯಗಳಿಗೂ, ಜನರಿಗೂ ನಿಜವಾದ ಸ್ವಾತಂತ್ರ್ಯ ಬರಬೇಕಿದೆ. ಈ ಸ್ವಾತಂತ್ರ್ಯದ ನಿಜವಾದ ಅರ್ಥ ಅವರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ವಾತಂತ್ರ್ಯ ನೀಡಿ ಅವರನ್ನು ಮುನ್ನಲೆಗೆ ತರುವುದೇ ಆಗಿದೆ. ಆಗ ಮಾತ್ರ ಭಾರತದ ಸ್ವಾತಂತ್ರ್ಯೋತ್ಸವ ಆಚರಣೆಗೆ ನಿಜಾರ್ಥ ಸಾಧಿಸಿದಂತಾಗುತ್ತದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು