ಈ ಬಾರಿ ಉತ್ತರ ಪ್ರದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಅಗ್ನಿಪಥ್ ಯೋಜನೆ, ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಮುಖ ಚುನಾವಣಾ ವಿಷಯವಾಗಿದೆ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಸುಮಾರು 8ರಿಂದ 10 ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ಯುವಕರ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ.
ಲೋಕಸಭಾ ಚುನಾವಣೆಯು ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಈ ಪೈಕಿ ಈಗಾಗಲೇ ನಾಲ್ಕು ಹಂತಗಳು ಮುಗಿದಿದೆ. ಐದನೇ ಹಂತವು ಮೇ 25(ಶನಿವಾರ) ನಡೆಯಲಿದೆ.
ಏಳು ಹಂತದ ಲೋಕಸಭೆ ಚುನಾವಣೆಯ ಐದನೇ ಸುತ್ತಿನಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳ ಪೈಕಿ ಪ್ರಮುಖ 14 ಲೋಕಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯಲಿದೆ. ಬಾಕಿ ಉಳಿಯುವ 13 ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಯು ಜೂನ್ 1ರಂದು ನಡೆಯುವ ಕೊನೆಯ ಹಾಗೂ 7ನೇ ಹಂತದಲ್ಲಿ ನಡೆಯಲಿದೆ. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಕೂಡ ಇರಲಿದೆ.
543 ಸದಸ್ಯರ ಲೋಕಸಭೆಯಲ್ಲಿ ಅತಿ ಹೆಚ್ಚು ಅಂದರೆ 80 ಲೋಕಸಭಾ ಕ್ಷೇತ್ರದ ಪ್ರಾತಿನಿಧ್ಯವನ್ನು ಹೊಂದಿರುವ ಏಕೈಕ ರಾಜ್ಯ ಉತ್ತರ ಪ್ರದೇಶ. ಪಶ್ಚಿಮ ಬಂಗಾಳದಲ್ಲಿ 42 ಸ್ಥಾನಗಳಿದ್ದರೆ, ಬಿಹಾರದಲ್ಲಿ 40 ಕ್ಷೇತ್ರಗಳಿವೆ. ಈ ಮೂರೂ ರಾಜ್ಯಗಳಲ್ಲಿ ಎಲ್ಲ ಏಳು ಹಂತಗಳಲ್ಲಿಯೂ ಕೂಡ ಮತದಾನ ನಡೆಯುತ್ತಿದೆ.
ಮೇ 25ರಂದು ಸುಲ್ತಾನಪುರ, ಪ್ರತಾಪಗಢ, ಫುಲ್ಪುರ್, ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ಡೊಮ್ರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್ಗಂಜ್, ಅಜಂಗಢ, ಜೌನ್ಪುರ್, ಮಚ್ಲಿಶಹರ್, ಭದೋಹಿ ಕ್ಷೇತ್ರಗಳಲ್ಲಿ ನಡೆಯಲಿದೆ.
ಈಗಾಗಲೇ ಅಂದರೆ ಮೇ 20ಕ್ಕೆ(ಸೋಮವಾರ) ನಡೆದಿರುವ ಐದನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ರಾಯ್‌ಬರೇಲಿ, ಸ್ಮೃತಿ ಇರಾನಿ ಸ್ಪರ್ಧಿಸಿದ್ದ ಅಮೇಥಿ ಲೋಕಸಭಾ ಕ್ಷೇತ್ರ ಕೂಡ ಒಳಗೊಂಡಿದ್ದವು. ರಾಯ್‌ಬರೇಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ.
ದೆಹಲಿ ಗದ್ದುಗೆಯ ಹಾದಿ ಹಿಡಿಯಬೇಕಾದರೆ ಭಾರೀ ಜನಬಾಹುಳ್ಯವಿರುವ ಸೀಮೆ ಎಂದರೆ ಅದು ಉತ್ತರಪ್ರದೇಶ. ಈ ರಾಜ್ಯದಲ್ಲಿ ಹೆಚ್ಚು ಸೀಟುಗಳನ್ನು ಗೆದ್ದವರೇ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಾರೆ ಎಂಬ ಮಾತಿದೆ. ಅಲ್ಲದೇ, ಅದು ಅಕ್ಷರಶಃ ನಿಜ ಕೂಡ ಆಗಿದೆ.
ಯಾವುದೇ ರಾಜಕೀಯ ಪಕ್ಷ ಅಧಿಕಾರದ ಕನಸು ಕಂಡರೆ, ಅದು ಮೊದಲು ನೋಡುವುದು ಉತ್ತರ ಪ್ರದೇಶದತ್ತಲೇ. ಹಾಗಾಗಿಯೇ, 2014ರಲ್ಲಿ ನರೇಂದ್ರ ಮೋದಿ ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಬಿಜೆಪಿ ಪರ ವಾತಾವರಣ ನಿರ್ಮಿಸಿದ್ದರು.
ಉತ್ತರ ಪ್ರದೇಶ ಬಿಟ್ಟರೆ ಇನ್ನೊಂದು ರಾಜ್ಯ ಬಿಹಾರ. ಈ ಎರಡೂ ರಾಜ್ಯಗಳಲ್ಲಿ ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಬೃಹತ್ ಗೆಲುವು ಸಾಧಿಸಿದೆ. ಈ ಎರಡು ಅಪ್ಪಟ ಹಿಂದಿ ಸೀಮೆಗಳು ಲೋಕಸಭೆಗೆ ಆರಿಸಿ ಕಳಿಸುವ ಸದಸ್ಯರ ಸಂಖ್ಯೆ ಒಟ್ಟು 120. ಸರ್ಕಾರ ರಚನೆಗೆ ಬೇಕಿರುವ ಸರಳ ಬಹುಮತದ ಸಂಖ್ಯೆ 272.
2019ರಲ್ಲಿ ಬಿಹಾರದ 40 ಸೀಟುಗಳ ಪೈಕಿ 33 ಸೀಟುಗಳು ಬಿಜೆಪಿ ಮತ್ತು ಮಿತ್ರಪಕ್ಷ ಸಂಯುಕ್ತ ಜನತಾದಳದ ಪಾಲಾಗಿದ್ದವು. ಉತ್ತರ ಪ್ರದೇಶದ 80ರ ಪೈಕಿ 61 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. 272ರ ಪೈಕಿ 94 ಸೀಟುಗಳು ಉತ್ತರಪ್ರದೇಶ ಬಿಹಾರದಿಂದಲೇ ಬಿಜೆಪಿಯ ಪಾಲಾಗಿದ್ದವು.
ಬಡತನ, ನಿರುದ್ಯೋಗ, ಸಮಸ್ಯೆ ಇರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 20 ಕೋಟಿ ಜನಸಂಖ್ಯೆಯನ್ನು ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟನ್ನು ಹೊಂದಿರುವ ಉತ್ತರ ಪ್ರದೇಶದ ತಲಾ ಆದಾಯ ಬಹಳಷ್ಟು ಶೋಚನೀಯ ಸ್ಥಿತಿಯಲ್ಲಿದೆ.
2019ರಲ್ಲಿ ಮೋದಿಯವರು ಪುಲ್ವಾಮಾ ಹುತಾತ್ಮರನ್ನು ಚುನಾವಣೆಗೆ ಬಳಸಿಕೊಂಡಿದ್ದರು. 2014ರಲ್ಲಿ ಕಾಂಗ್ರೆಸ್ ವಿರೋಧದ ಅಲೆಯನ್ನು ತಮ್ಮ ಪರವಾಗಿ ಹಣಿದು ಕಟ್ಟಿಕೊಂಡು ವಿಜಯಿಯಾಗಿದ್ದರು. ಈ ಸಲ ಇಂತಹ ಯಾವುದೇ ಅಂಶ ಮೋದಿಯವರ ನೆರವಿಗೆ ಇಲ್ಲವಾಗಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಅಗ್ನಿಪಥ್ ಯೋಜನೆ, ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಕೂಡ ಪ್ರಮುಖ ಸಮಸ್ಯೆಯಾಗಿ ಬಿಟ್ಟಿದೆ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಸುಮಾರು 8ರಿಂದ 10 ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ಹಲವಾರು ಯುವಕರ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ.
ನಿರುದ್ಯೋಗದ ಸಮಸ್ಯೆಯಿಂದಾಗಿ ವಲಸೆ ಕಾರ್ಮಿಕರಾಗಿ ದಕ್ಷಿಣದ ರಾಜ್ಯಗಳಿಗೆ ಬಂದು, ದುಡಿಯುತ್ತಿದ್ದಾರೆ. ತಮ್ಮ ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಗಳಿಸಿದ್ದರೂ ಉದ್ಯೋಗ ಸಿಗದೆ, ಕೊನೆಗೆ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶಗಳಿಗೆ ವಲಸೆ ಬರುತ್ತಿರುವ ಸುಶಿಕ್ಷಿತ ನಿರುದ್ಯೋಗಿ ಯುವಕರು, ಕೂಲಿ ಕಾರ್ಮಿಕರಾಗಿ, ಸೇಲ್ಸ್‌ಮೆನ್‌ಗಳಾಗಿ, ಸೆಕ್ಯೂರಿಟಿ ಗಾರ್ಡ್‌ಗಳಾಗಿ, ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಾ, ವರ್ಷಕ್ಕೊಂದೆರಡು ಸಲ ಊರಿಗೆ ತೆರಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಹೀಗಾಗಿಯೇ, ಈ ಬಾರಿಯ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನೇ ಪ್ರಮುಖ ದಾಳವಾಗಿ, ಬಿಜೆಪಿ ವಿರುದ್ಧ ಪ್ರಯೋಗಿಸಿದೆ. ಅಲ್ಲದೇ, ಅದನ್ನು ಪ್ರಣಾಳಿಕೆಯಲ್ಲೂ ಸೇರಿಸಿದೆ. ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಭರ್ತಿ ಮಾಡುವುದಾಗಿ ಘೋಷಿಸಿದೆ. ಇದು ಯುಪಿಯ ಯುವಕರಲ್ಲಿ ಹೊಸ ಆಶಾವಾದ ಉಂಟು ಮಾಡಿದೆ. ಅಲ್ಲದೇ, ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದೆ.
ಜೊತೆಗೆ ಪ್ರತಿ ತಿಂಗಳು ಕುಟುಂಬದ ಯಜಮಾನಿಯ ಖಾತೆಗೆ ಎಂಟೂವರೆ ಸಾವಿರ ರೂಪಾಯಿ, (ವರ್ಷಕ್ಕೆ ಒಂದು ಲಕ್ಷ ರೂಪಾಯಿ) ಬಂದು ಬೀಳುತ್ತದೆ ಎಂಬ ವಚನ ನೀಡಿದೆ. ಉದ್ಯೋಗ ಖಾತರಿ, ರೈತರ ಸಾಲ ಮನ್ನಾದ ಬಗ್ಗೆಯೂ ಮಾತನಾಡಿದೆ. ಇವೆಲ್ಲ ಭರವಸೆಗಳು ಇಂಡಿಯಾ ಮೈತ್ರಿಕೂಟ ನೀಡುತ್ತಿದ್ದರೆ, ಪ್ರಧಾನಿ ಮೋದಿಯವರು ಹಿಂದೂ-ಮುಸ್ಲಿಂ, ರಾಮಮಂದಿರದ ಜಪ ಮಾಡುತ್ತಿದ್ದಾರೆ. ಆದರೆ ಇವ್ಯಾವು ಕೂಡ ಈ ಬಾರಿ ಉತ್ತರ ಪ್ರದೇಶದಲ್ಲಿ ನಡೆಯಲ್ಲ ಅನ್ನೋದು ಮಾತ್ರ ವಾಸ್ತವ. ಯಾಕೆಂದರೆ ಇಂಡಿಯಾ ಮೈತ್ರಿಕೂಟದ ಪ್ರಚಾರ ಸಭೆಗಳಲ್ಲಿ ಜನ ಸೇರುತ್ತಿರುವುದು ಎನ್‌ಡಿಎ ಮೈತ್ರಿಕೂಟದ ನಿದ್ದೆಗೆಡಿಸಿದೆ.
ಯಾರಿಗೆ ಎಷ್ಟು ಸ್ಥಾನ?
ಕಾಂಗ್ರೆಸ್-ಎಸ್‌ಪಿ ಇರುವ ಇಂಡಿಯಾ ಮೈತ್ರಿಕೂಟ, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಬಹುಜನ ಸಮಾಜ ಪಾರ್ಟಿ ಉತ್ತರ ಪ್ರದೇಶದಲ್ಲಿ ಸದ್ಯ ಚುನಾವಣೆ ಗೆಲ್ಲುವ ಪ್ರಮುಖ ಪಕ್ಷಗಳು. ಹಲವು ಕ್ಷೇತ್ರಗಳಲ್ಲಿ ಈ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.
ಈ ಬಾರಿಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿರುವ 80ರ ಪೈಕಿ ನಾವು 40ರಿಂದ 50ರಷ್ಟು ಸೀಟುಗಳನ್ನು ಗೆಲ್ಲಲಿದ್ದೇವೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ಹೇಳುತ್ತಿದ್ದರೆ, ಚುನಾವಣಾ ಶಾಸ್ತ್ರಜ್ಞ ಪ್ರಶಾಂತ್ ಕಿಶೋರ್ ಇಂಡಿಯಾ ಮೈತ್ರಿಕೂಟವು 25ರಿಂದ 30 ಸೀಟು ಬರಬಹುದು ಎಂದು ಊಹಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯತೆಯನ್ನು ಎಷ್ಟೇ ಚುನಾವಣಾ ವಿಷಯವನ್ನಾಗಿಸಿದರೂ ಅಂತಿಮವಾಗಿ ಅಲ್ಲಿನ ಜಾತಿ ಸಮೀಕರಣದ ಮೇಲೆ ಸೋಲು, ಗೆಲುವು ನಿರ್ಧಾರವಾಗುತ್ತದೆ.
ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಒಬಿಸಿಗಳಿದ್ದಾರೆ. ಯಾರು ಹಿಂದುಳಿದ ವರ್ಗ ಮತ್ತು ಅತಿ ಹಿಂದುಳಿದ ವರ್ಗದ ಜನರನ್ನು ಸೆಳೆಯುತ್ತಾರೋ ಅವರು ಗೆಲ್ಲುತ್ತಾರೆ. ಬಿಜೆಪಿ ಕಳೆದ 2 ಚುನಾವಣೆಯಲ್ಲಿ ಇದೇ ತಂತ್ರ ಅನುಸರಿಸಿತ್ತು. ಆದರೆ, ಈ ಬಾರಿ ಅದೇ ಯಶಸ್ಸು ಮರಳುವುದು ಅನುಮಾನ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಯಾಕೆಂದರೆ, ಕಾಂಗ್ರೆಸ್ ಮತ್ತು ಎಸ್‌ಪಿ ಒಟ್ಟಾಗಿರುವುದಲ್ಲದೇ, ಹಿಂದುಳಿದ ವರ್ಗಗಳು, ದಲಿತ ಮತ್ತು ಅಲ್ಪಸಂಖ್ಯಾತ ಸೂತ್ರವನ್ನು ನೆಚ್ಚಿಕೊಂಡಿದೆ. ಇದೇನಾದರೂ ವರ್ಕೌಟ್ ಆದರೆ ಬಿಜೆಪಿಗೆ ಸಂಕಷ್ಟ ತಪ್ಪಿದ್ದಲ್ಲ. ಹಾಗೆ ನೋಡಿದರೆ, ಬಿಎಸ್‌ಪಿ ಹೆಚ್ಚು ಮತಗಳನ್ನು ಪಡೆದಷ್ಟೂ ಅದು ಬಿಜೆಪಿಗೆ ಲಾಭವಾಗಲಿದೆ. ಹಾಗಾಗಿ, ಪ್ರತಿಪಕ್ಷಗಳು ಬಿಎಸ್‌ಪಿಯನ್ನು ಬಿಜೆಪಿಯ ‘ಬಿ ಟೀಮ್’ ಎಂದು ಮೂದಲಿಸುತ್ತಿವೆ. ಆದರೆ, ಈ ಬಾರಿ ಮಾಯಾವತಿಯವರು ಯಾವ ಮೈತ್ರಿಕೂಟದೊಂದಿಗೂ ಕೈಜೋಡಿಸಿಲ್ಲ. ಹಾಗಾಗಿ, ಈ ಬಾರಿ ಮಾಯಾವತಿಯವರ ಪ್ರಭಾವ ಅಷ್ಟೇನೂ ಕಾಣುತ್ತಿಲ್ಲ.
ಉತ್ತರ ಪ್ರದೇಶದಲ್ಲಿ ಕಳೆದ 2 ಅವಧಿಯಿಂದ ಬಿಜೆಪಿ ಸರ್ಕಾರವಿದೆ. ಹಾಗಾಗಿ, ಉತ್ತರ ಪ್ರದೇಶದಲ್ಲಿ ಮೋದಿ-ಯೋಗಿ ಫ್ಯಾಕ್ಟರ್ ಈ ಹಿಂದೆ ಕೆಲಸ ಮಾಡಿತ್ತು. ಆದರೆ, ಈ ಬಾರಿ ನಿರುದ್ಯೋಗ, ಬೆಲೆ ಏರಿಕೆ, ಅಗ್ನಿಪಥ್ ಯೋಜನೆ, ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಂಥ ವಿಷಯಗಳು ಅಡ್ಡಗಾಲು ಹಾಕಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಅದೇ ಮಾತನ್ನು ಕಾಂಗ್ರೆಸ್‌ಗೆ ಹೇಳುವಂತಿಲ್ಲ. ಇಂಡಿಯಾ ಕೂಟದ ನೇತೃತ್ವವನ್ನು ವಹಿಸಿದ್ದರೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೂನಿಯರ್ ಪಕ್ಷ. ಹೀಗಿದ್ದೂ, ಇಂಡಿಯಾ ಕೂಟಕ್ಕೆ ಒಂಚೂರು ಆಶಾವಾದವಂತೂ ಇದ್ದೇ ಇದೆ. ಯುಪಿಯಲ್ಲಿ ಬಿಜೆಪಿಯು ಜಾಟ್ ಸೇರಿದಂತೆ ಅದರ ಬೆಂಬಲಿಗರಿಂದಲೇ ಪ್ರತಿರೋಧ ಅನುಭವಿಸಿದೆ. ಅದೇ ರೀತಿ ಪರಿಸ್ಥಿತಿಯನ್ನು ಇಂಡಿಯಾ ಕೂಟವು ಇತರ ಭಾಗಗಳಿಂದ ನಿರೀಕ್ಷಿಸುತ್ತಿದೆ. ಹಾಗೇನಾದರೂ ಆದರೆ ಇಂಡಿಯಾ ಕೂಟಕ್ಕೆ ನಿರೀಕ್ಷೆಗಿಂತ ಹೆಚ್ಚು ಸೀಟು ಬರಲೂಬಹುದು.
ಗಮನ ಸೆಳೆಯುವ ಕ್ಷೇತ್ರ ಮತ್ತು ಅಭ್ಯರ್ಥಿಗಳು
ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಣಾಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧ್ಯಕ್ಷ ಅಜಯ್ ರಾಯ್ ಕಣದಲ್ಲಿದ್ದಾರೆ. ಮೈನಾಪುರಿಯಲ್ಲಿ ಎಸ್‌ಪಿ ನಾಯಕಿ, ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಮತ್ತು ಬಿಜೆಪಿಯ ಅಭ್ಯರ್ಥಿ, ಯುಪಿ ಸಚಿವ ಜೈವೀರ್ ಸಿಂಗ್ ಠಾಕೂರ್ ಕಣದಲ್ಲಿದ್ದಾರೆ.
1991ರಿಂದ ಬಿಜೆಪಿ ವಶದಲ್ಲಿರುವ ಲಕ್ನೋ ಕ್ಷೇತ್ರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಈ ಬಾರಿ ಎಸ್‌ಪಿಯ ರವಿದಾಸ್ ಮಹೋತ್ರಾ ಮತ್ತು ಬಿಎಸ್‌ಪಿ ಸರ್ವರ್ ಮಲಿಕ್ ಸವಾಲು ಹಾಕಿದ್ದಾರೆ. ಸುಲ್ತಾನ್‌ಪುರದಲ್ಲಿ ಬಿಜೆಪಿ ಮನೇಕಾ ಗಾಂಧಿ ಅಭ್ಯರ್ಥಿಯಾಗಿದ್ದಾರೆ.
ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸಿದ್ದಾರೆ. 2019ರಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧಿಸಿ ಸೋತಿದ್ದು, ಈ ಬಾರಿ ತನ್ನ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ.
ರಾಹುಲ್ ಗಾಂಧಿ ಕೇವಲ ರಾಯ್‌ಬರೇಲಿಯಲ್ಲದೇ, ಕೇರಳದ ವಯನಾಡ್‌ನಿಂದಲೂ ಸ್ಪರ್ಧಿಸಿದ್ದಾರೆ. 2019ರಲ್ಲಿ ಕೇರಳದ ವಯನಾಡ್‌ನಿಂದ ಜಯಗಳಿಸಿ, ಸಂಸದರಾಗಿದ್ದರು. ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಅದೃಷ್ಟ ಕೈ ಹಿಡಿದರೆ ಯಾವ ಕ್ಷೇತ್ರ ಉಳಿಸಿಕೊಳ್ಳಲಿದ್ದಾರೆ. ಅವರು ಬಿಟ್ಟುಕೊಡುವ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಎಲ್ಲ ಕುತೂಹಲಕ್ಕೂ ಜೂನ್ 4ರಂದು ಉತ್ತರ ಸಿಗಲಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.