ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಬುಧವಾರ ಉಂಟಾಗಿರುವ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಸೇರಿದಂತೆ 40 ಮಂದಿ ಮೃತಪಟ್ಟಿರುವ ವರದಿಯಾಗಿದೆ. 60 ಮಂದಿ ಗಾಯಗೊಂಡಿದ್ದು, 25 ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದೆ ಎಂದು ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ತಿಳಿಸಿದ್ದಾರೆ.
ಮುಂಜಾನೆ 3ಗಂಟೆಯ ಬ್ರಹ್ಮ ಮುಹೂರ್ತದಲ್ಲಿ ನೀರಿನಲ್ಲಿ ಸ್ನಾನ ಮಾಡಲೆಂದು ಅಖಾಡ ಕ್ಷೇತ್ರದಲ್ಲಿ ಸಾವಿರಾರು ಮಂದಿ ಮಲಗಿದ್ದರು. ಮುಹೂರ್ತದ ಸಮಯವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯ ಜನರು ಹಿಂದು ಮುಂದು ನೋಡದೆ ನುಗ್ಗಿದರು. ಬ್ಯಾರಿಕೇಡ್‌ಗಳನ್ನು ನೆಲಕ್ಕುರುಳಿಸಿ ಮಲಗಿದವರನ್ನು ತುಳಿದುಕೊಂಡು ಹೋಗಿದ್ದರಿಂದ ಈ ದುರಂತ ಸಂಭವಿಸಿದೆ.
ದುರಂತದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಡಿಐಜಿ ವೈಭವ್ ಕೃಷ್ಣ, “ಪ್ರಯಾಗ್‌ರಾಜ್ ಕಾಲ್ತುಳಿತದ ಸಹಾಯವಾಣಿ ಸಂಖೆ 1920. ಮಹಾಕುಂಭ ಮೇಳಕ್ಕೆ ಬಂದಿದ್ದ ಕುಟುಂಬದವರು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇಂದು ಮೌನಿ ಅಮಾವಾಸ್ಯೆಯಾದ್ದರಿಂದ ಮಹಾಕುಂಭ ಮೇಳಕ್ಕೆ ಲಕ್ಷಾಂತರ ಮಂದಿ ಆಗಮಿಸಿದ್ದರು. ಯಾರಿಗೂ ವಿಐಪಿ, ವಿವಿಐಪಿ ವ್ಯವಸ್ಥೆ ಮಾಡಿರಲಿಲ್ಲ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಾ ಕುಂಭಮೇಳ ಕಾಲ್ತುಳಿತ | ಕೇಂದ್ರ, ಯೋಗಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
“ಮೃತಪಟ್ಟವರ ಪೈಕಿ ಕರ್ನಾಟಕದ ನಾಲ್ವರು, ಅಸ್ಸಾಂನ ಒಬ್ಬರು, ಗುಜರಾತ್‌ನ ಒಬ್ಬರು ಇದ್ದಾರೆ. ಗಾಯಗೊಂಡವರನ್ನು ಅವರ ಸಂಬಂಧಿಕರು ಕರೆದೊಯ್ದಿದ್ದಾರೆ. 36 ಮಂದಿ ಗಾಯಾಳುಗಳು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.