ತರಬೇತಿ ಕೇಂದ್ರಗಳ ಹಬ್ ಎಂದೇ ಗುರುತಿಸಿಕೊಂಡಿರುವ ರಾಜಸ್ಥಾನದ ಕೋಟಾದಲ್ಲಿ ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಿಗಾಗಿ ಸಿದ್ದತೆ ನಡೆಸಲು ಕೋಟಾಗೆ ಬರುವ ಹಲವಾರು ಆಕಾಂಕ್ಷಿಗಳು ಫೇಲ್ ಆಗುವ ಭಯ, ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೀಗ, ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಇದು ಈ ತಿಂಗಳಲ್ಲಿ ನಡೆದ 3ನೇ ಪ್ರಕರಣವಾಗಿದೆ.
18 ವರ್ಷದ ವಿದ್ಯಾರ್ಥಿಯೊಬ್ಬರು ತಾವು ವಾಸಿಸುತ್ತಿದ್ದ ಪಿಜಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಡಿಶಾ ಮೂಲದ ವಿದ್ಯಾರ್ಥಿ ನೀಟ್ ತಯಾರಿಗಾಗಿ ಕೋಟಾಗೆ ಬಂದಿದ್ದರು. ವಿಜ್ಞಾನ ನಗರದಲ್ಲಿ ವಾಸಿಸುತ್ತಿದ್ದರು. ಆದರೆ, ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳ್ಕೆ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಕಳೆದ ವಾರ ಕೋಟಾದಲ್ಲಿಯೇ ಜೆಇಇಗಾಗಿ ತಯಾರಿ ನಡೆಸುತ್ತಿದ್ದ ಇಬ್ಬರು ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಜನವರಿ 8 ರಂದು, ಜೆಇಇ ಆಕಾಂಕ್ಷಿ ಮಧ್ಯಪ್ರದೇಶದ ಮೂಲಕ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಜನವರಿ 7 ರಂದು, ಹರಿಯಾಣದ ಮತ್ತೊಬ್ಬ ಜೆಇಇ ಆಕಾಂಕ್ಷಿ ನೀರಜ್ (19) ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಲ್ಲದೆ, 2024ರಲ್ಲಿಯೂ ಹಲವಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2024ರಲ್ಲಿ ಕೋಟಾದಲ್ಲಿಯೇ 19 ಮಂದಿ ಸಾವನ್ನಪ್ಪಿದ್ದರೆ, 2023ರಲ್ಲಿ 29 ಮಂದಿ ಸಾವನ್ನಪ್ಪಿದ್ದರು. ಈ ವರ್ಷದ ಆರಂಭದಲ್ಲಿಯೇ 3 ಮಂದಿ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.
