ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಕೆಂಪು ಸೂಟ್ಕೇಸ್ನ ಒಳಗೆ ಮಹಿಳೆಯ ಶವ ಪತ್ತೆಯಾಗಿದೆ. ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಕರು ಸೂಟ್ಕೇಸ್ ಅನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.
ಸೂಟ್ಕೇಸ್ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಸ್ಥಳಕ್ಕೆ ಧಾವಿಸಿ ಸೂಟ್ಕೇಸ್ ಅನ್ನು ಪರಿಶೀಲಿಸಿದಾಗ ಪೊಲೀಸರಿಗೆ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ವಯಸ್ಸು 25 ರಿಂದ 30 ವರ್ಷ ಎಂದು ಹೇಳಲಾಗಿದೆ. ಹಾಗೆಯೇ ಮೃತದೇಹದಲ್ಲಿ ಅಲ್ಲಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕೋಲಾರ | ಆತಂಕ ಸೃಷ್ಟಿಸಿದ್ದ ಸೆನ್ಸಾರ್ ಸೂಟ್ಕೇಸ್; ಲಘು ಸ್ಫೋಟದ ಮೂಲಕ ನಾಶ
ಫೋರೆನ್ಸಿಕ್ ತಜ್ಞರೊಂದಿಗೆ ಪೊಲೀಸ್ ತಂಡವು ಸ್ಥಳಕ್ಕೆ ತೆರಳಿದ್ದರು. ಸೂಟ್ಕೇಸ್ ಲಭಿಸಿದ ಸುತ್ತಲಿನ ಪ್ರದೇಶವನ್ನು ಫೋರೆನ್ಸಿಕ್ ತಜ್ಞರು ಪರಿಶೀಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಎಸ್ಪಿ ವಿನೀತ್ ಭಟ್ನಾಗರ್, “ಮಹಿಳೆಯ ದೇಹದಲ್ಲಿರುವ ಗಾಯಗಳನ್ನು ನೋಡಿದಾಗ ಸುಮಾರು ಒಂದು ದಿನದ ಹಿಂದೆ ಮಹಿಳೆ ಸಾವನ್ನಪ್ಪಿರಬಹುದು ಎಂದನಿಸುತ್ತದೆ. ಸದ್ಯ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆಯನ್ನು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.
