ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಪ್ರಸನ್ನ ಬಿ ವರಾಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ವರಾಳೆ ಅವರ ಪ್ರಮಾಣ ವಚನ ಸ್ವೀಕಾರದೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿದೆ.
ಇದಲ್ಲದೆ ದಲಿತ ಸಮುದಾಯದ ಪ್ರಸನ್ನ ಬಿ ವರಾಳೆ ಸೇರ್ಪಡೆಯೊಂದಿಗೆ ಸುಪ್ರೀಂ ಕೋರ್ಟ್ ನಲ್ಲಿ ದಲಿತ ಸಮುದಾಯದ ನ್ಯಾಯಾಧೀಶರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮೂವರು ದಲಿತ ಸಮುದಾಯದವರು ನ್ಯಾಯಾಧೀಶರಾಗಿರುವುದು ಇದೇ ಮೊದಲು.
ಪ್ರಸ್ತುತ ಸುಪ್ರೀಂನಲ್ಲಿ ನ್ಯಾಯಮೂರ್ತಿಗಳಾಗಿರುವ ಬಿ ಆರ್ ಗವಾಯಿ ಹಾಗೂ ಸಿ ಟಿ ರವಿಕುಮಾರ್ ದಲಿತ ಸಮುದಾಯದವರು. ಇದು ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅತಿ ಹೆಚ್ಚು ಪ್ರಾತಿನಿಧ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈವಭಕ್ತಿ ಮತ್ತು ಕುಟುಂಬ ಕಲ್ಯಾಣ
ವರಾಳೆ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಪ್ರಮಾಣ ವಚನ ಬೋಧಿಸಿದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲು ವರಾಳೆ ಬಾಂಬೆ ಹೈಕೊರ್ಟಿನ ನ್ಯಾಯಾಧೀಶರಾಗಿದ್ದರು.
ಸುಪ್ರೀಂ ಕೋರ್ಟ್ ಕೊಲಿಜಿಯಂ ವರಾಳೆ ಅವರನ್ನು ಶಿಫಾರಸ್ಸು ಮಾಡಿದ 7 ದಿನಗಳಲ್ಲಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವರಾಳೆ ಅವರನ್ನು ಜನವರಿ 19ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಅನಿರುದ್ಧ ಬೋಸ್ ಅವರಿದ್ದ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.
ಕಳೆದ ವರ್ಷ ಡಿಸೆಂಬರ್ 25ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ನಿವೃತ್ತರಾದ ಕಾರಣ ಒಂದು ಹುದ್ದೆ ಖಾಲಿಯಾಗಿತ್ತು.
1962ರ ಜೂನ್ 23ರಂದು ಬೆಳಗಾವಿಯ ನಿಪ್ಪಾಣಿಯಲ್ಲಿ ಜನಿಸಿದ್ದ ವರಾಳೆ ಔರಂಗಾಬಾದ್‌ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠಾವಾಡ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದರು. ಆಗಸ್ಟ್ 12 1985ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು ಹಲವು ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. 2008 ರ ಜುಲೈ 18ರಂದು ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲಾಯಿತು.
“ಇವರು ದೋಷಾರೂಪಣೆ ಮಾಡಲಾಗದ ಸಮರ್ಥ ನ್ಯಾಯಮೂರ್ತಿ. ಇವರು ವೃತ್ತಿಪರ ನೈತಿಕತೆಯು ಉತ್ತಮ ಗುಣಮಟ್ಟದಿಂದ ಕೂಡಿದೆ” ಎಂದು ಡಿ ವೈ ಚಂದ್ರಚೂಡ್ ನೇತೃತ್ವದ ಐವರ ಕೊಲಿಜಿಯಂ ಸಮಿತಿ ತಿಳಿಸಿದೆ.