ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಪರಿಗಣನೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ನ್ಯಾಯಾಲಯವು ರಾಜ್ಯಪಾಲರ ಮುಖ್ಯ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಕೇಂದ್ರ ಹಾಗೂ ರಾಜ್ಯಪಾಲರ ಕಚೇರಿಯ ಜತೆಗೆ, ವಿಚಾರಣೆ ಸಂಬಂಧ ನೀವು ಅಥವಾ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಹಾಯ ಮಾಡಬೇಕು ಎಂದು ಅಟಾರ್ನಿ ಜನರಲ್ ವಿ. ವೆಂಕಟರಮಣಿ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು. ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು.
ಕೇರಳ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿ, ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್‌ಗೆ ಮೂರು ಸಲ್ಲಿಕೆಗಳನ್ನು ಸಲ್ಲಿಸಿದ್ದರು.
ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಪರಿಗಣಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ’
ರಾಜ್ಯಪಾಲರು ಬಾಕಿ ಇರುವ 8 ಮಸೂದೆಗಳನ್ನು ಅಂಗೀಕರಿಸಲು ವಿನಾಕಾರಣ ವಿಳಂಬ ಮಾಡುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯಗಳಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು.
ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಮಸೂದೆಗಳನ್ನು ಅಂಗೀಕರಿಸದೆ ಅಥವಾ ಹಿಂದಿರುಗಿಸದೆ ನಾಗರಿಕರ ಕಲ್ಯಾಣದ ಆದೇಶದೊಂದಿಗೆ ಆಟವಾಡುತ್ತಿದ್ದಾರೆ ಎಂದು ತಮಿಳುನಾಡನ್ನು ಪ್ರತಿನಿಧಿಸಿದ್ದ ವಕೀಲರು ಆರೋಪಿಸಿದರು.
ರಾಜ್ಯಪಾಲರು ತನ್ನನ್ನು ತಾನು “ರಾಜಕೀಯ ಪ್ರತಿಸ್ಪರ್ಧಿ” ಎಂದು ಬಿಂಬಿಸಿಕೊಂಡಿದ್ದಾರೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.
ಪಂಜಾಬ್ ರಾಜ್ಯಪಾಲರು ಏಳು ಮಸೂದೆಗಳನ್ನು ಜೂನ್‌ನಿಂದ ಅಂಗೀಕರಿಸದೆ ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ.
ತೆಲಂಗಾಣ ರಾಜ್ಯಪಾಲರು ಸೆಪ್ಟೆಂಬರ್ 2022 ರಿಂದ ಬಾಕಿ ಉಳಿಸಿಕೊಂಡಿದ್ದ ಮಸೂದೆಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಏಪ್ರಿಲ್‌ನಲ್ಲಿ ಮಧ್ಯ ಪ್ರವೇಶಿಸಬೇಕಾಯಿತು.