ಸುಪ್ರೀಂ ಕೋರ್ಟ್‌ನ ಎಲ್ಲ 33 ಹಾಲಿ ನ್ಯಾಯಾಧೀಶರು ತಮ್ಮ ಆಸ್ತಿಗಳ ವಿವರಗಳನ್ನು ಸರ್ವೋಚ್ಛ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನ್ಯಾಯಾಧೀಶರು ಪಾರದರ್ಶಕತೆ ತೋರಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಏಪ್ರಿಲ್ 1 ರಂದು ನಡೆದ ನ್ಯಾಯಾಲಯದ ಪೂರ್ಣ ನ್ಯಾಯಾಧೀಶರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ನಿರ್ಧಾರವು ಭವಿಷ್ಯದಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕವಾಗುವ ನ್ಯಾಯಾಧೀಶರಿಗೂ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಅಪಾರದರ್ಶಕತೆ ಇದೆ ಎಂಬ ಇತ್ತೀಚಿನ ಆರೋಪಗಳು ಮತ್ತು ವಿವಾದಗಳು ಹಾಗೂ ವಿಶೇಷವಾಗಿ ಪ್ರಸ್ತುತ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ವರದಿಯಾದ ಬಳಿಕ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ವರದಿ ಓದಿದ್ದೀರಾ?: ಸುಪ್ರೀಂ ಕೋರ್ಟ್ ತೀರ್ಪು ಮತ್ತು ‘ಬುಲ್ಡೋಜರ್ ನ್ಯಾಯ’: ದಂಡನೆಯ ಹೆಸರಿನಲ್ಲಿ ದ್ವೇಷ ಸಾಧನೆ
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಆಸ್ತಿಗಳನ್ನು ಪ್ರಕಟಿಸುವುದು ಈ ಹಿಂದೆ ಕಡ್ಡಾಯವಾಗಿರಲಿಲ್ಲ. ಆದರೆ, ಅದು ನ್ಯಾಯಾಧೀಶನ ವಿವೇಚನೆಗೆ ಒಳಪಟ್ಟಿತ್ತು. ನ್ಯಾಯಾಧೀಶರು ತಮ್ಮ ಇಚ್ಛೆಯಂತೆ ವೆಬ್‌ಸೈಟ್‌ನಲ್ಲಿ ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಬಹುದಿತ್ತು.
1997ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಧೀಶರ ಸಭೆಯು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ತಮ್ಮ ಆಸ್ತಿಗಳ ಕುರಿತ ವರದಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ)ಗೆ ಸಲ್ಲಿಸುವುದು ಕಡ್ಡಾಯವೆಂದು ನಿರ್ಧರಿಸಿತ್ತು. ಆನಂತರ, 2009ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಧೀಶರ ಸಭೆಯು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ಆ ವರ್ಷದ ಆಗಸ್ಟ್ 26ರಂದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಆಸ್ತಿಗಳ ವಿವರಗಳನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೂ, ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಆಸ್ತಿ ವಿವರ ಅಪ್‌ಲೋಡ್ ಮಾಡುವುದು ನ್ಯಾಯಾಧೀಶರ ವಿವೇಚನೆಯಂತೆಯೇ ನಡೆಯುತ್ತಿತ್ತು. ಇದೀಗ, ಆಸ್ತಿ ಘೋಷಿಸುವುದನ್ನು ಕಡ್ಡಾಯವೆಂದು ನಿರ್ಧರಿಸಲಾಗಿದೆ.