ಚುನಾವಣಾ ಬಾಂಡ್‌ಗಳ ಸಂಖ್ಯೆಗಳನ್ನು ಸರಿಯಾಗಿ ಬಹಿರಂಗಪಡಿಸಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ತಾನು ಹಿಂದೆ ನೀಡಿದ ಆದೇಶವನ್ನು ಪಾಲಿಸಿಲ್ಲ ಎಂದು ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಚುನಾವಣಾ ಬಾಂಡ್‌ಗಳ ಸಂಖ್ಯೆಯನ್ನು ಸರಿಯಾಗಿ ವರ್ಗೀಕರಿಸಲಾಗಿಲ್ಲ. ಯಾವ ಸಂಸ್ಥೆ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎಂಬುದನ್ನು ನಿಖರವಾಗಿ ಬಹಿರಂಗಪಡಿಸಿಲ್ಲ ಎಂದು ಎಸ್‌ಬಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಎಸ್‌ಬಿಐ ಹಂಚಿಕೊಂಡಿರುವ ಮಾಹಿತಿ ಅಪೂರ್ಣವಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್‌ನ ಐವರು ನೇತೃತ್ವದ ಪೀಠ ಮಾರ್ಚ್ 18ರ ಮುಂದಿನ ವಿಚಾರಣೆ ವೇಳೆಗೆ ಲೋಪವನ್ನು ಸರಿಪಡಿಸಿ ಸರಿಯಾದ ಮಾಹಿತಿ ನೀಡಬೇಕೆಂದು ನೋಟಿಸ್ ನೀಡಿತು. ಇಂದಿನ ವಿಚಾರಣೆಯಲ್ಲಿ ಎಸ್‌ಬಿಐ ವಕೀಲರು ಹಾಜರಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಮತ್ತು ಆರ್ಥಿಕತೆಯ ನಿಜನೋಟ
”ಎಸ್‌ಬಿಐ ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ. ಇದನ್ನು ಎಸ್‌ಬಿಐ ಬಹಿರಂಗಪಡಿಸಬೇಕು” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
ಎಸ್‌ಬಿಐ ಚುನಾವಣಾ ಬಾಂಡ್‌ಗಳ ಅಂಕಿಅಂಶಗಳನ್ನು ಮಾರ್ಪಡಿಸದೆ ಸಲ್ಲಿಸಿದೆ ಎಂದು ಚುನಾವಣಾ ಆಯೋಗ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ ನಂತರ ಈ ಬೆಳವಣಿಗೆ ಬಂದಿದೆ.
ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ನೀಡಿದ ಮುಚ್ಚಿದ ಲಕೋಟೆಯ ದಾಖಲೆಗಳು ಸ್ಕ್ಯಾನ್ ಹಾಗೂ ಡಿಜಿಟಲೀಕರಣಗೊಂಡಿದೆಯೆ ಎಂಬುದನ್ನು ಖಚಿತಪಡಿಸುವಂತೆ ನ್ಯಾಯಾಂಗ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ. ಇದನ್ನು ಮಾರ್ಚ್ 16 ರಂದು ಸಂಜೆ 5 ಗಂಟೆಯೊಳಗೆ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ.
