ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೊ ಒಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು “ಕ್ಷಮಿಸಿದ್ದೇನೆ” ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಕೇವಲ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮಾತ್ರ ಕ್ಷಮಿಸುತ್ತೀರಾ ಅಥವಾ ವಿದ್ಯಾರ್ಥಿಗಳ ಮೇಲಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುತ್ತೀರಾ?” ಎಂದು ಅವರು ಪ್ರಧಾನಿಯವರನ್ನು ಕಮೆಂಟ್ ಬಾಕ್ಸ್‌ನಲ್ಲಿ ನೇರವಾಗಿ ಪ್ರಶ್ನಿಸಿದ್ದಾರೆ.
‘ನೀಟ್’ (NEET) ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿತ್ತು ಎಂದು ಪ್ರಧಾನಿ ಮೋದಿ ವಿಡಿಯೊದಲ್ಲಿ ಉಲ್ಲೇಖಿಸಿದ್ದರು. “ನಿಂದನೆ ಯಾವುದಕ್ಕೂ ಪರಿಹಾರವಲ್ಲ; ಯುವಕರನ್ನು ಶಿಕ್ಷಿಸುವುದು, ಕೋರ್ಟ್-ಕಚೇರಿ ಎಂದು ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ದಾರಿ ತಪ್ಪಿದ ಯುವಕರನ್ನು ಕ್ಷಮಿಸಿ ಸರಿದಾರಿಗೆ ತರಲು ಬಯಸುತ್ತೇನೆ” ಎಂದು ಮೋದಿ ತಮ್ಮ ವಿಡಿಯೊದಲ್ಲಿ ಹೇಳಿದ್ದರು.
ಪ್ರಧಾನಿಯವರ ಈ ಕ್ಷಮಾಪಣೆಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಭಿಜೀತ್ ದೀಪ್ಕೆ, ಸರ್ಕಾರದ ಮಾತು ಮತ್ತು ಕೃತಿಯ ನಡುವಿನ ದ್ವಂದ್ವವನ್ನು ಎತ್ತಿ ತೋರಿಸಿದ್ದಾರೆ. ಒಂದು ಕಡೆ ಪ್ರಧಾನಿ ಕ್ಷಮೆಯ ಮಾತಾಡುತ್ತಿದ್ದರೆ, ಇನ್ನೊಂದೆಡೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ಬಂಧನದ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಮಾಧ್ಯಮದವರ ಮೇಲೆ ಆಕ್ಷೇಪಾರ್ಹ ಪದ ಬಳಸಿದ್ದ ಬಿಜೆಪಿ ನಾಯಕರ ವಿರುದ್ಧ ಯಾವುದೇ ಕ್ರಮವಿಲ್ಲ, ಆದರೆ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ; ಈ ದೇಶದಲ್ಲಿ ಸಾಮಾನ್ಯ ಯುವಜನತೆಗೆ ಒಂದು ಕಾನೂನು, ಬಿಜೆಪಿ ನಾಯಕರಿಗೆ ಇನ್ನೊಂದು ಕಾನೂನು ಇದೆಯೇ?” ಎಂದು ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಜಂತರ್ ಮಂತರ್ ಪ್ರತಿಭಟನೆಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದ 15 ವರ್ಷದ ಬಾಲಕಿಯು ಕ್ಷಮಾಪಣೆಯ ವಿಡಿಯೊ ಬಿಡುಗಡೆ ಮಾಡಿದ್ದಾಳೆ. “ನಾನು ತಪ್ಪು ಮಾಡಿದ್ದೇನೆ, ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು, ಇತರರ ಪ್ರಭಾವಕ್ಕೆ ಒಳಗಾಗಿ ಹೀಗೆ ಮಾತನಾಡಿದೆ” ಎಂದು ಆಕೆ ಕ್ಷಮೆ ಯಾಚಿಸಿದ್ದಾಳೆ. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಕೂಡ ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಅಪ್ರಾಪ್ತ ಪ್ರತಿಭಟನಾಕಾರರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.




