ನ್ಯೂಸ್ಕ್ಲಿಕ್ ಸಂಪಾದಕರಾದ ಪ್ರಭೀರ್ ಪುರ್ಕಾಯಸ್ಥ ಅವರನ್ನು ಬಂಧಿಸಿ ಅವರ ವಕೀಲರಿಗೂ ಮಾಹಿತಿ ನೀಡದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಅಷ್ಟು ಆತುರವೇನಿತ್ತು ಎಂದು ದೆಹಲಿ ಪೊಲೀಸ್ ವಿಶೇಷ ಘಟಕವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಸಂದೀಪ್ ಮೆಹ್ತಾ ಒಳಗೊಂಡ ಪೀಠ ದೆಹಲಿ ಪೊಲೀಸರನ್ನು ಪ್ರಶ್ನಿಸಿತು. “ ನೀವು ಏಕೆ ಸಂಪಾದಕರ ವಕೀಲರಿಗೆ ಮುಂಚಿತವಾಗಿ ತಿಳಿಸಲಿಲ್ಲ? ನೀವು ಹಿಂದಿನ ದಿನದ ಸಂಜೆ ಬಂಧಿಸಿದ್ದೀರಿ. ನೀವು ಒಂದು ದಿನ ಪೂರ್ತಿ ವಕೀಲರಿಗೆ ಮಾಹಿತಿ ನೀಡಿಲ್ಲ. ಮರುದಿನ ಬೆಳಿಗ್ಗೆ 6 ಗಂಟೆಗೆ ಕೋರ್ಟಿಗೆ ಹಾಜರುಪಡಿಸಲು ಅಷ್ಟು ಆತುರವೇನಿತ್ತು” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
“ನೀವು ಬೆಳಿಗ್ಗೆ 10 ಗಂಟೆಗೆ ಹಾಜರುಪಡಿಸಬಹುದಿತ್ತು. ನ್ಯಾಯದ ಸಾಮಾನ್ಯ ತತ್ವದ ಅಗತ್ಯತೆಗಳ ಅನುಸಾರ ಬೆಳಿಗ್ಗೆ 10 ರಿಂದ 11 ಗಂಟೆಯೊಳಗೆ ಹಾಜರುಪಡಿಸಿ, ಅವರ ವಕೀಲರಿಗೂ ಮುಂಚಿತವಾಗಿ ತಿಳಿಸಬಹುದಾಗಿತ್ತು” ಎಂದು ಪೀಠವು ಹೇಳಿತು.
ಪ್ರಭೀರ್ ಪುರ್ಕಾಯಸ್ಥ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಮುನ್ನ ಅವರ ವಕೀಲರಿಗೆ ತಿಳಿಸದಿರುವುದಕ್ಕೆ ಸುಪ್ರೀಂ ಕೋರ್ಟ್ ಪೀಠ ಆಶ್ಚರ್ಯ ವ್ಯಕ್ತಪಡಿಸಿತು.
ಬಂಧನದ ಸಮಯದಲ್ಲಿ ತನಿಖಾ ಸಂಸ್ಥೆಯ ನಡವಳಿಕೆಯನ್ನು ಕೋರ್ಟ್ ಪ್ರಶ್ನೆ ಮಾಡಿತು.” ಅನ್ಯಾಯ ಮಾತ್ರ ಆಗಬಾರದು, ಆದರೆ ಇಲ್ಲಿ ಅದು ತೋರುತ್ತದೆ” ಎಂದು ನ್ಯಾಯಾಧೀಶರು ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕಕ್ಷಿದಾರ ನ್ಯೂಸ್ಕ್ಲಿಕ್ ಸಂಪಾದಕ ಪ್ರಭೀರ್ ಪುರ್ಕಾಯಸ್ಥ ಅವರನ್ನು ಬಂಧಿಸಿರುವುದು ಅಕ್ರಮ. ಅವರಿಗೆ ಬಂಧನದ ಯಾವುದೇ ಮಾನದಂಡಗಳನ್ನು ಅನುಸರಿಸಲಾಗಿಲ್ಲ ಎಂದು ಹಿರಿಯ ವಕೀಲ ಕಪಿಲ್ ಸಿಬಾಲ್ ಕೋರ್ಟ್ಗೆ ಮನವರಿಕೆ ಮಾಡಿದರು.
“ಕಳೆದ 180 ದಿನಗಳಿಂದ ಸರಿಯಾದ ಅನುಮೋದನೆಗಳೊಂದಿಗೆ ನೀವು ಸಮರ್ಪಕವಾದ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ” ಎಂದು ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ಚೀನಾ ನೆರವಿನೊಂದಿಗೆ ನ್ಯೂಸ್ ಕ್ಲಿಕ್ ವೇದಿಕೆಯ ಮೂಲಕ ದೇಶ ವಿರೋಧಿ ಪ್ರಚಾರ ನಡೆಸುತ್ತಿರುವ ಆರೋಪದಲ್ಲಿ ಕಳೆದ ವರ್ಷ 2023ರ ಅಕ್ಟೋಬರ್ 3 ರಂದು ಪುರ್ಕಾಯಸ್ಥ ಅವರನ್ನು ಬಂಧಿಸಲಾಗಿದೆ.

ಬಿಜೆಪಿ ವಿರೋಧಿಗಳನ್ನು ದೇಶ ವಿರೋಧಿಗಳೆಂದು ಆರೋಪಿಸುವುದು , ಬಳಿಕ ಅವರನ್ನು ಬಂಧಿಸಿ ಜೈಲಿನಲ್ಲಿ ಹಾಕುವುದು ತೀರಾ ಖಂಡನೀಯ !
ಬಿಜೆಪಿ ವಿರೋಧಿಗಳು ಬಿಜೆಪಿ ಸೇರಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವುದು , ಬಳಿಕ ಅವರ ಮೇಲಿದ್ದ ಎಲ್ಲ ಮೊಕದ್ದಮೆಗಳನ್ನು ರದ್ದುಗೊಳಿಸುವುದೂ ಅಷ್ಟೇ ಖಂಡನೀಯ !
ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಭಾರತ ಕಂಗಾಲಾಗಿದೆ. ಕೊನೆಯದೊಂದು ಅವಕಾಶ ಮತದಾರರ ಮುಂದಿದೆ. ಮತದಾರರು ಎಚ್ಚೆತ್ತುಕೊಂಡು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಮತದಾನ ಮಾಡಬೇಕಾಗಿದೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮಾಡೋಣ. ಯಾರು ಸೋತರೂ ಪರವಾಗಿಲ್ಲ ; ದೇಶವನ್ನು ಗೆಲ್ಲಿಸೋಣ. 🇮🇳🙏