ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿಎಎ) ವಿರುದ್ಧ ಸಲ್ಲಿಕೆಯಾಗಿರುವ ಸುಮಾರು 200ಕ್ಕೂ ಅಧಿಕ ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸುಪ್ರೀ ಕೋರ್ಟ್, ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಆದರೆ, ಸಿಎಎ ಕಾಯ್ದೆಯ ನಿಯಮಗಳಿಗೆ ಸಂಬಂಧಿಸಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಸೇರಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಇಂದು ತಡೆಯಾಜ್ಞೆಯ ಮನವಿಯ ಕುರಿತು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 2ರೊಳಗೆ ಅದರ ಉತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
“ತಡೆಯಾಜ್ಞೆ ಅರ್ಜಿಗಳ ಬಗ್ಗೆ ಏಪ್ರಿಲ್ 2ರೊಳಗೆ ಐದು ಪುಟಗಳಿಗೆ ಸೀಮಿತವಾದ ಉತ್ತರವನ್ನು ಕೇಂದ್ರ ಸರ್ಕಾರವು ಸಲ್ಲಿಕೆ ಮಾಡಬೇಕು. ಪ್ರತಿವಾದಿಗಳು ಏಪ್ರಿಲ್ 8ರೊಳಗೆ ಅರ್ಜಿಗೆ 5 ಪುಟಗಳ ಉತ್ತರವನ್ನು ನೀಡಲಿ. ನಂತರ ಏಪ್ರಿಲ್ 9ರಂದು ಮುಂದಿನ ವಿಚಾರಣೆ ನಾವು ನಡೆಸುತ್ತೇವೆ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಡೆ ಕೋರಿ ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದರು. ಇದಕ್ಕೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ವಿರೋಧಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ನಗರ್ತಪೇಟೆ ಘಟನೆಗೆ ಕೋಮು ಬಣ್ಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು
ಕೊನೆಗೆ ಮೂವರು ನ್ಯಾಯಾಧೀಶರಿದ್ದ ನ್ಯಾಯ ಪೀಠವು, ಮೂರು ವಾರಗಳ ನಂತರ ಪ್ರಕ್ರಿಯೆಗಳನ್ನು ಪಟ್ಟಿ ಮಾಡುವಂತೆ ನಿರ್ದೇಶನ ನೀಡಿ, ಅರ್ಜಿಯನ್ನು ಏಪ್ರಿಲ್ 9ಕ್ಕೆ ಮತ್ತೆ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿತು.
