ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರ ಎನ್‌ಜಿಒ ಸಬ್ರಂಗ್ ಟ್ರಸ್ಟ್‌ಗೆ ಸಂಬಂಧಿಸಿದ 1.4 ಕೋಟಿ ರೂಪಾಯಿ ಹಣ ದುರುಪಯೋಗ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿದ್ದ ಗುಜರಾತ್ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ತ್ರಿಸದಸ್ಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರೊಂದಿಗೆ ಸಹಕರಿಸುವಂತೆ ಸೆಟಲ್ವಾಡ್ ಮತ್ತು ಅವರ ಪತಿಗೆ ಸೂಚಿಸಿದೆ. ಇವರಿಬ್ಬರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಪ್ರತಿಕ್ರಿಯಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ʻಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲʼ ಎಂದು ಸಿಎಂ ಯಾರನ್ನು ಹೆದರಿಸುತ್ತಿದ್ದಾರೆ?
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ, “ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ, ಸಹಕಾರದ ಕೊರತೆಯ ಅಂಶಗಳಿವೆ ಎಂದು ಸರ್ಕಾರದ ಪರವಾಗಿ ಎಎಸ್‌ಜಿ ಸಲ್ಲಿಸಿದರು. ಇದಕ್ಕೆ ಪ್ರತಿವಾದಿ ವಕೀಲರು, ‘ಅಗತ್ಯವಿದ್ದಾಗ ತನಿಖೆಗೆ ಸಹಕರಿಸುತ್ತಾರೆ’ ಎಂದು ಪ್ರತಿಕ್ರಿಯೆ ನೀಡಿದರು.
“ಜಾಮೀನು ನೀಡುವ ಹಂತದಲ್ಲಿ ಪ್ರಕರಣದ ವಿಚಾರಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳುವುದು ಈಗ ಹಳೆಯ ವಿಷಯವಾಗಿದೆ. ನಾವು ಹೆಚ್ಚಿಗೆ ಏನನ್ನೂ ಹೇಳುವ ಅಗತ್ಯವಿಲ್ಲ ಎಂದು ಪೀಠವು ಈ ಸಂದರ್ಭದಲ್ಲಿ ಹೇಳಿತು.
2008 ಮತ್ತು 2013 ರ ನಡುವೆ ತಮ್ಮ ಎನ್‌ಜಿಒ ಸಬ್ರಂಗ್ ಟ್ರಸ್ಟ್ ಮೂಲಕ ಕೇಂದ್ರ ಸರ್ಕಾರದಿಂದ 1.4 ಕೋಟಿ ರೂಪಾಯಿಗಳ ಅನುದಾನವನ್ನು ತೀಸ್ತಾ ಸೆಟಲ್ವಾಡ್ ಮತ್ತು ಆನಂದ್ ವಂಚನೆಯಿಂದ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಅಹಮದಾಬಾದ್ ಅಪರಾಧ ವಿಭಾಗವು ಹಣ ದುರುಪಯೋಗದ ಪ್ರಕರಣವನ್ನು ದಾಖಲಿಸಿದೆ.