ಕಾರ್ಖಾನೆಯಲ್ಲಿ ತನ್ನ ಮೊಬೈಲ್ ಕದ್ದಿದ್ದಾನೆ ಎಂಬ ಆರೋಪದ ಮೇಲೆ ಕಾರ್ಖಾನೆ ಮಾಲೀಕನೊಬ್ಬ 14 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಪಶ್ಚಮ ಬಂಗಾಳದಲ್ಲಿ ನಡೆದಿದೆ. ಸಂತ್ರಸ್ತ ಬಾಲಕನನ್ನು ತಲೆ ಕೆಳಗಾಗಿ ನೇತು ಹಾಕಿ, ವಿದ್ಯುತ್ ಶಾಕ್ ಕೊಟ್ಟು ಮಾಲೀಕ ವಿಕೃತಿ ಮೆರೆದಿದ್ದಾನೆ.
ಬಂಗಾಳದ ಮಹೇಶತಲಾದ ಕಂಖುಲಿ ಪುರ್ಬಪಾರ ಪ್ರದೇಶದಲ್ಲಿರುವ ಜೀನ್ಸ್‌ಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದಾಗ ತನ್ನ ಮೊಬೈಲ್‌ಅನ್ನು ಬಾಲಕ ಕದ್ದಿದ್ದಾನೆಂದು ಕಾರ್ಖಾನೆ ಮಾಲೀಕ ಅನುಮಾನಿಸಿದ್ದಾನೆ. ಶಂಕೆಯ ಮೇಲೆ ಬಾಲಕನ ಮೇಲೆ ಕ್ರೂರವಾಗಿ ದಾಳಿ ನಡೆಸಿದ್ದಾನೆ. ಅಲ್ಲದೆ, ವಿದ್ಯುತ್ ಶಾಕ್ ಕೊಟ್ಟು ಕ್ರೌರ್ಯ ಎಸಗಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿ, ತ್ವರಿತ ತನಿಖೆ ನಡೆಸಲಾಗುತ್ತಿದೆ. ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಕುಟುಂಬಸ್ಥರು ಮೊಬೈಲ್ ಕಳ್ಳತನದ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ಮಗ ಯಾವುದೇ ಮೊಬೈಲ್ ಕದ್ದಿಲ್ಲ, ಸುಳ್ಳು ಆರೋಪ ಮಾಡಿ, ಆತನ ಮೇಲೆ ಕ್ರೌರ್ಯ ಮೆರೆದು, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಬಾಲಕ ಮೊಬೈಲ್ ಕದ್ದಿದ್ಧಾನೆ ಎಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ವಿನಾಕಾರಣ ಬಾಲಕನಿಗೆ ಚಿತ್ರಹಿಂಸೆ ನೀಡಲಾಗಿದೆ. ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ” ಎಂದು ಬಾಲಕನ ಕುಟುಂಬಸ್ಥರು ಹೇಳಿದ್ದಾರೆ.