ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ ಸ್ವತಂತ್ರ ಭಾರದ್ವಾಜ್ ಎಂಬ ಹಿಂದುತ್ವ ಕಾರ್ಯಕರ್ತನನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರ ತಂಡ ಆತನನ್ನು ಬಂಧಿಸಲು ತೆರಳಿದಾಗ, ಆತ ಮೋಟರ್ ಸೈಕಲ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಆದರೆ, ಸತತ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರ ವಿಶೇಷ ಪಡೆ ಆತನನ್ನು ಧಮ್ರಾ ನಾರಾ ಗ್ರಾಮದ ಬಳಿ ವಶಕ್ಕೆ ತೆಗೆದುಕೊಂಡಿದೆ.
ಇದನ್ನೂ ಓದಿ: ಒಬ್ಬನ ತಲೆಬುರುಡೆ ಒಡೆದರೂ ಜೈಲಿಗೆ ಹೋಗಿಲ್ಲ, ಬಿಜೆಪಿ ‘ಆಶೀರ್ವಾದ’ದ ಬಲ ಎಂದ ಹಿಂದುತ್ವ ಕಾರ್ಯಕರ್ತ; ವಿಡಿಯೋ ವೈರಲ್
ಜುಲೈ 20ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ನಡೆಯುತ್ತಿದ್ದಾಗ ವಿಡಿಯೋ ರೆಕಾರ್ಡಿಂಗ್ ವಿಚಾರವಾಗಿ ಗಲಾಟೆ ನಡೆದಿತ್ತು. ಈ ವೇಳೆ ಸಂಜಯ್ ಕುಮಾರ್ ಅವರ ಮೇಲೆ ದಾಳಿ ನಡೆಸಿ, ಅವರ ತಲೆಗೆ ತೀವ್ರ ಗಾಯಗೊಳಿಸಲಾಗಿತ್ತು. ಈ ಸಂಬಂಧ ದೆಹಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪಾಡ್‌ಕಾಸ್ಟ್ ವಿಡಿಯೋ ತುಣುಕಿನಲ್ಲಿ ಸ್ವತಂತ್ರ ಭಾರದ್ವಾಜ್, “ನಾನೇ ಆತನ ತಲೆಬುರುಡೆ ಒಡೆದೆ, ಆತನಿಗೆ 60 ಹೊಲಿಗೆಗಳು ಬಿದ್ದಿವೆ” ಎಂದು ಹೇಳಿಕೊಂಡಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜಕೀಯ ರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ, ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಹಾಗೂ ಸಿಜೆಪಿ ಮುಖಂಡರು ಆರೋಪಿಯ ತಕ್ಷಣದ ಬಂಧನಕ್ಕೆ ಒತ್ತಾಯಿಸಿ ದೆಹಲಿ ಪೊಲೀಸರನ್ನು ಭೇಟಿಯಾಗಿದ್ದರು.
ಸಾರ್ವಜನಿಕ ಮತ್ತು ರಾಜಕೀಯ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ, ಪೊಲೀಸರು ಎಸ್‌ಸಿ/ಎಸ್‌ಟಿ (SC/ST) ದೌರ್ಜನ್ಯ ತಡೆ ಕಾಯ್ದೆಯಡಿ ಹೆಚ್ಚುವರಿ ಪ್ರಕರಣ ದಾಖಲಿಸಿ, ಆತನ ಬಂಧನಕ್ಕಾಗಿ ಕಾರ್ಯಾಚರಣೆ ತೀವ್ರಗೊಳಿಸಿ ಈಗ ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಸ್ವತಂತ್ರ ಭಾರದ್ವಾಜ್, “ನನ್ನ ಸುತ್ತ 10-15 ಜನರು ಮುತ್ತಿಗೆ ಹಾಕಿದ್ದರು, ನಾನು ಕೇವಲ ಆತ್ಮರಕ್ಷಣೆಗಾಗಿ ಪ್ರತ್ಯುತ್ತರ ನೀಡಿದೆ. ಇಲ್ಲದಿದ್ದರೆ ನನ್ನ ಮೇಲೆ ಗುಂಪು ದಾಳಿಯಾಗುತ್ತಿತ್ತು” ಎಂದು ಸಮರ್ಥಿಸಿಕೊಂಡಿದ್ದಾನೆ.





