ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗ ಖಾತರಿ ಅವಧಿಯನ್ನು 150 ದಿನಗಳಿಗೆ ಹೆಚ್ಚಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ‘ವೆಟ್ರಿ 150’ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೇಂದ್ರದ ‘ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಯೋಜನೆಯಡಿ ನಿಗದಿಪಡಿಸಿರುವ 125 ದಿನಗಳ ಉದ್ಯೋಗವನ್ನು ಪೂರ್ಣಗೊಳಿಸಿದ ಅರ್ಹ ಕುಟುಂಬಗಳಿಗೆ ರಾಜ್ಯ ಸರ್ಕಾರದ ನಿಧಿಯಿಂದ ಹೆಚ್ಚುವರಿ 25 ದಿನಗಳ ಉದ್ಯೋಗ ಒದಗಿಸಲಾಗುತ್ತದೆ. 2026-27ನೇ ಹಣಕಾಸು ವರ್ಷದಲ್ಲಿ ಯೋಜನೆ ಅನುಷ್ಠಾನಗೊಳಿಸಲು ತಮಿಳುನಾಡು ಸರ್ಕಾರ ₹100 ಕೋಟಿ ಆರ್ಥಿಕ ಅನುಮೋದನೆಯನ್ನೂ ನೀಡಿದೆ.
ತಮಿಳುನಾಡಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಕುರಿತು ಸರ್ಕಾರಿ ಆದೇಶ ಹೊರಡಿಸಿದೆ. ಅದರ ಪ್ರಕಾರ, ಕೇಂದ್ರದ ಉದ್ಯೋಗ ಖಾತರಿ ಯೋಜನೆಯಡಿ 125 ದಿನಗಳ ಉದ್ಯೋಗ ಪೂರ್ಣಗೊಳಿಸಿದ ಬಳಿಕ ಗುರುತಿಸಲಾದ ದುರ್ಬಲ ಕುಟುಂಬಗಳಿಗೆ ಹೆಚ್ಚುವರಿ 25 ದಿನಗಳ ಉದ್ಯೋಗ ನೀಡಲಾಗುತ್ತದೆ.
ಯೋಜನೆಯಡಿ, ಮಹಿಳೆಯರ ನೇತೃತ್ವದ ಕುಟುಂಬಗಳು, ಒಂಟಿ ಮಹಿಳೆಯರ ಕುಟುಂಬಗಳು, ಅಂಗವಿಕಲರನ್ನು ಹೊಂದಿರುವ ಕುಟುಂಬಗಳು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಕುಟುಂಬಗಳು, 2006ರ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆಯಡಿ ಸೌಲಭ್ಯ ಪಡೆಯುವವರು ಆದ್ಯತೆಯ ಮೇರೆಗೆ ಹೆಚ್ಚುವರಿ ಉದ್ಯೋಗ ಪಡೆಯಲಿದ್ದಾರೆ.
ಈ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೆರವು ನೀಡುವುದು ಯೋಜನೆಯ ಉದ್ದೇಶವಾಗಿದೆ.
2026ರ ತಮಿಳುನಾಡು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ ಉದ್ಯೋಗ ಖಾತರಿಯನ್ನು 150 ದಿನಗಳಿಗೆ ಹೆಚ್ಚಿಸುವ ಭರವಸೆ ನೀಡಿತ್ತು. ಪಕ್ಷದ ನೇತೃತ್ವದ ಸರ್ಕಾರದ ಮೊದಲ ಬಜೆಟ್ ಮಂಡನೆಯ ಸಂದರ್ಭದಲ್ಲಿ ಆಗಸ್ಟ್ 5, 2026ರಂದು ‘ವೆಟ್ರಿ 150’ ಯೋಜನೆಯನ್ನು ಘೋಷಿಸಲಾಗಿತ್ತು. ಇದೀಗ ಯೋಜನೆಗೆ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡುವ ಮೂಲಕ ಚುನಾವಣಾ ಭರವಸೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ವಿಬಿ ಜಿ ರಾಮ್ ಜಿ | ಮೋದಿ ಸರ್ಕಾರದ ವೆಚ್ಚ ಸೂತ್ರಕ್ಕೆ ರಾಜ್ಯ ಬಿಜೆಪಿ ಸರ್ಕಾರಗಳಿಂದಲೇ ವಿರೋಧ!
VB-G RAM G ಯೋಜನೆಯಡಿ, ನೋಂದಾಯಿತ ಗ್ರಾಮೀಣ ಕುಟುಂಬಗಳು ಒಂದು ಹಣಕಾಸು ವರ್ಷದಲ್ಲಿ ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸಿದ್ಧರಿದ್ದರೆ ಅವರಿಗೆ 125 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತದೆ. ಈ ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಶೇ. 60 ಮತ್ತು ಶೇ. 40ರ ಅನುಪಾತದಲ್ಲಿ ಭರಿಸುತ್ತವೆ.
ತಮಿಳುನಾಡಿನ ‘ವೆಟ್ರಿ 150’ ಯೋಜನೆಯಡಿ, ನಿಗದಿತ 125 ದಿನಗಳ ಉದ್ಯೋಗ ಪೂರ್ಣಗೊಳಿಸಿದ ಅರ್ಹ ದುರ್ಬಲ ಕುಟುಂಬಗಳಿಗೆ ರಾಜ್ಯ ಸರ್ಕಾರದ ಹಣದಿಂದ ಹೆಚ್ಚುವರಿ 25 ದಿನಗಳ ಕೆಲಸ ನೀಡಲಾಗುತ್ತದೆ. ಇದರಿಂದ ಆಯ್ದ ಕುಟುಂಬಗಳಿಗೆ ವರ್ಷದಲ್ಲಿ ಒಟ್ಟು 150 ದಿನಗಳ ಉದ್ಯೋಗದ ಅವಕಾಶ ದೊರೆಯಲಿದೆ.





