ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇನ್ನೂ 5 ದಿನಗಳ (ಅ.24ರವರೆಗೆ) ಕಾಲ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಕರಾವಳಿ ಕರ್ನಾಟಕದ ಭಾಗಗಳಲ್ಲಿ ಅಕ್ಟೋಬರ್ 20ರಿಂದ 22ರವರೆಗೆ ಮತ್ತು ದಕ್ಷಿಣ ಒಳನಾಡಿನ ವ್ಯಾಪ್ತಿಯಲ್ಲಿ ಅಕ್ಟೋಬರ್ 24ರವರೆಗೆ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಬಿರುಗಾಳಿ ಸಹಿತ ಮಳೆಯಾಗಲಿದೆ.
ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು ಹಾಗೂ ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜೊತೆಗೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಮಳೆಯಾಗಲಿದೆ.
ಈ ಲೇಖನ ಓದಿದ್ದೀರಾ?: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್ ಏನು ಹೇಳುತ್ತಾರೆ?
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕೆಲವೆಡೆ ಬಿರುಗಾಳಿ ಸಹಿತ ಮಳೆಯಾದರೆ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಉಳಿದಂತೆ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ನೈಋತ್ಯ ಮುಂಗಾರಿನಲ್ಲಿ ಶೇ. 35ರಷ್ಟು ಮಳೆ ಕೊರತೆ ಎದುರಿಸಿದ್ದ ಕರ್ನಾಟಕಕ್ಕೆ, ಹಿಂಗಾರು ಮಳೆಯು ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಕೊಂಚ ನಿರಾಳತೆ ತರುವ ನಿರೀಕ್ಷೆಯಿದೆ.




