ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಇಂದು(ಆಗಸ್ಟ್ 21) ಒಪ್ಪಿಗೆ ನೀಡಿದೆ.
ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ಪೀಠದ ಮುಂದೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಕರ್ನಾಟಕಕ್ಕೆ ಕಾವೇರಿ ನೀರು ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಾಗಿ ಪ್ರತ್ಯೇಕ ಪೀಠ ರಚನೆಗೆ ಒಪ್ಪಿಗೆ ನೀಡಿದ್ದಾರೆ. ಆಗಸ್ಟ್ 21ರಂದೇ ಪೀಠ ರಚನೆಯಾಗಲಿದ್ದು, ವಿಚಾರಣೆ ಕೂಡ ಇಂದೇ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ತಮಿಳುನಾಡು ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಹಾಗೂ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ಅವರು ತುರ್ತು ಮನವಿಯ ಅರ್ಜಿಯನ್ನು ಪ್ರಸ್ತಾಪಿಸಿದ್ದಾರೆ.
“ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ ನೀರನ್ನು ಬಿಡುಗಡೆ ಮಾಡಲು ಇದು ತುರ್ತು ಮನವಿಯಾಗಿದೆ. ನಿಮ್ಮ ನೇತೃತ್ವದಲ್ಲಿ ನ್ಯಾಯ ಪೀಠವನ್ನು ರಚಿಸಬೇಕು” ಎಂದು ಮುಕುಲ್ ರೋಹಟಗಿ ಮನವಿಯಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ಹಗರಣ: ಸಿಬಿಐ ತನಿಖೆಗೆ ವಹಿಸಿದ ಕೇಂದ್ರ
“ಇಂದೇ ನಾನು ಪೀಠವನ್ನು ರಚಿಸುತ್ತೇನೆ” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಪ್ರತಿಕ್ರಿಯಿಸಿದರು. ರೋಹಟಗಿ ಅವರು ಕೂಡ ಪ್ರಕರಣವನ್ನು ಶೀಘ್ರವಾಗಿ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಾಧೀಶರನ್ನು ಒತ್ತಾಯಿಸಿದರು.
ಆಗಸ್ಟ್ 14 ರಿಂದ ಪ್ರಾರಂಭವಾಗುವ ಉಳಿದ ತಿಂಗಳ ಅವಧಿಗೆ ಬಿಳಿಗುಂಡ್ಲು ಜಲಾಶಯದಿಂದ 24,000 ಕ್ಯೂಸೆಕ್ಸ್ ಕಾವೇರಿ ನೀರನ್ನು ತಕ್ಷಣವೇ ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
2018 ರಲ್ಲಿ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಕಾವೇರಿ ನ್ಯಾಯಮಂಡಳಿ ತೀರ್ಪು ಪ್ರಕಾರ 2023 ಸೆಪ್ಟೆಂಬರ್ ತಿಂಗಳಿಗೆ (36.76 ಟಿಎಂಸಿ) ನಿಗದಿತ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸುವಂತೆ ತಮಿಳುನಾಡು ಸರ್ಕಾರ ನ್ಯಾಯಾಲಯವನ್ನು ಒತ್ತಾಯಿಸಿದೆ.
ಪ್ರಸಕ್ತ ನೀರಾವರಿ ವರ್ಷದಲ್ಲಿ ಜೂನ್ 1 ರಿಂದ ಜುಲೈ 31 ರವರೆಗಿನ ಅವಧಿಯಲ್ಲಿ ಕರ್ನಾಟಕವು 28.849 ಟಿಎಂಸಿ ನೀರಿನ ಕೊರತೆಯನ್ನು ಸರಿದೂಗಿಸಬೇಕು ಎಂದು ತಮಿಳುನಾಡು ಹೇಳಿದೆ.
ಕಾವೇರಿ ಜಲ ವಿವಾದದಲ್ಲಿ ಈ ಮನವಿಯನ್ನು ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ಅನ್ನು ಆಗ್ರಹಿಸಿದ ರೋಹಟಗಿ, ತಪ್ಪಲು ಜಿಲ್ಲೆಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ತುರ್ತಾಗಿ ನೀರಿನ ಅಗತ್ಯತೆ ಇದೆ ಎಂದು ತಮ್ಮ ವಾದದಲ್ಲಿ ತಿಳಿಸಿದ್ದಾರೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘಿಸಲಾಗಿದ್ದು, ಕರ್ನಾಟಕವು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಬಿಳಿಗುಂಡ್ಲುವಿನಲ್ಲಿ 2023 ಆಗಸ್ಟ್ 11ರಂದು ಮುಂದಿನ 15 ದಿನಗಳಲ್ಲಿ ಬಿಡುಗಡೆ ಮಾಡಬೇಕಾಗಿದ್ದ ನೀರಿನ ಪ್ರಮಾಣವನ್ನು 15 ಸಾವಿರ ಕ್ಯೂಸೆಕ್ಸ್ (ಪ್ರತಿದಿನ 0.864 ಟಿಎಂಸಿ)ನಿಂದ 10 ಸಾವಿರ ಕ್ಯೂಸೆಕ್ಸ್‌ಗೆ ಇಳಿಕೆ ಮಾಡಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.