ಕರ್ನಾಟಕದ ಬಡಪಾಯಿ ಲಾರಿ ಚಾಲಕನೋರ್ವನ ಮೇಲೆ ತಮಿಳುನಾಡು ಟ್ರಾಫಿಕ್ ಪೊಲೀಸ್ ಪೇದೆಯೋರ್ವ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಕರ್ನಾಟಕ-ತಮಿಳನಾಡು ಗಡಿಭಾಗದ ಹೊಸೂರು ಭಾಗದಲ್ಲಿ ನಡೆದಿದೆ.
ಕರ್ನಾಟಕ- ತಮಿಳುನಾಡಿನ ಹೊಸೂರು ಗಡಿಭಾಗದಲ್ಲಿ ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ರ‍್ಯಾಶ್ ಡ್ರೈವಿಂಗ್ ಮಾಡುತ್ತಿದ್ದೀಯಾ’ ಎಂದು ಆರೋಪಿಸಿ ಲಾರಿ ಚಾಲಕನ ಅಡ್ಡಗಟ್ಟಿ ಕಪಾಳ, ಮುಖ ಅಂತ ನೋಡದೆ ಹಲ್ಲೆ ನಡೆಸಿದ್ದಾರೆ. ಬಿಟ್ಬಿಡಿ ಸರ್ ಎಂದು ಚಾಲಕ ಅಂಗಲಾಚಿದರೂ ಬಿಡದೆ ಟ್ರಾಫಿಕ್ ಪೊಲೀಸ್ ಪೇದೆ ಹಲ್ಲೆ ನಡೆಸಿದ್ದಾರೆ.
ಹೊಸೂರಿನಿಂದ ಬೆಂಗಳೂರು ಕಡೆ ಬರುತ್ತಿದ್ದ ಕಾರು ಚಾಲಕನೋರ್ವ ಹಲ್ಲೆ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್, ಬಳಿಕ ಕಾರು ಚಾಲಕನಿಗೂ ಬೆದರಿಕೆ ಹಾಕಿ ತಮಿಳುನಾಡು ಪೊಲೀಸ್ ವಿಡಿಯೊ ಡಿಲೀಟ್ ಮಾಡಿಸಿದ್ದಾರೆ. ಆದರೂ, ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಸುಮಾರು 33 ಸೆಕೆಂಡ್‌ನ ವಿಡಿಯೋ ಹರಿದಾಡಿದ್ದು, ಅದರಲ್ಲಿ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ವಾಗ್ವಾದ ನಡೆದಿರುವುದು ಕೂಡ ದಾಖಲಾಗಿದೆ.
ಸದ್ಯ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಮೇಲೆ ತಮಿಳುನಾಡು ಪೊಲೀಸರ ದೌರ್ಜನ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಲಾರಿ ಚಾಲಕ ರ‍್ಯಾಶ್ ಡ್ರೈವಿಂಗ್ ಮಾಡಿದ್ದಿದ್ದರೆ ಸೌಜನ್ಯದಿಂದ ವರ್ತಿಸಿ, ಕೇಸು ದಾಖಲಿಸಬಹುದಿತ್ತು. ಅದು ಬಿಟ್ಟು ಗೂಂಡಾ ರೀತಿಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು, ತಮಿಳುನಾಡು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, “ಇದು ಅನ್ಯಾಯ. ಕರ್ನಾಟಕದ ಲಾರಿ ಡ್ರೈವರ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ ತಮಿಳುನಾಡು ಟ್ರಾಫಿಕ್ ಪೊಲಿಸ್ ಸಿಬ್ಬಂದಿ ವಿರುದ್ಧ ತಮಿಳುನಾಡು ಸಿಎಂ ಎಂ ಕೆ ಸ್ಟ್ಯಾಲಿನ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
