ಅಮೆರಿಕದ ಟೆಕ್ಸಾಸ್ ಮೂಲದ ಅಲೈಸ್ ಒಗ್ಲೆಟ್ರೀ ಅವರು 2,645.58 ಲೀಟರ್ ತಮ್ಮ ಎದೆ ಹಾಲು ದಾನ ಮಾಡಿ, 3.6 ಲಕ್ಷ ನವಜಾತ ಶಿಶುಗಳ ಆರೈಕೆಗೆ ನೆರವಾಗಿದ್ದರು. ಆ ಮೂಲಕ, ಎದೆ ಹಾಲು ದಾನದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು. ಅಂತೆಯೇ, ಭಾರತದಲ್ಲಿಯೂ ಮಹಿಳೆಯೊಬ್ಬರು 300 ಲೀಟರ್ ತಮ್ಮ ಎದೆ ಹಾಲು ದಾನ ಮಾಡುವ ಮೂಲಕ ಸಾವಿರಾರು ಮಕ್ಕಳ ಜೀವ ಉಳಿಸಲು ನೆರವಾಗಿದ್ದಾರೆ. ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದಾರೆ.
ತಮಿಳುನಾಡಿನ ತಿರುಚಿರಾಪಲ್ಲಿಯ ಕಟ್ಟೂರು ಗ್ರಾಮದ ಮಹಿಳೆ ಸೆಲ್ವಾ ಬೃಂದಾ ಅವರು 2023ರ ಏಪ್ರಿಲ್ನಿಂದದ 2025ರ ಫೆಬ್ರವರಿವರೆಗೆ 300 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ. ಅವರು ದಾನ ಮಾಡಿದ ಎದೆ ಹಾಲು, ಅವಧಿಪೂರ್ವ ಜನಿಸಿದ ಮಕ್ಕಳು ಮತ್ತು ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ಮಕ್ಕಳ ಜೀವ ಉಳಿಸಲು ನೆರವಾಗಿದೆ.
ಎರಡು ಮಕ್ಕಳ ತಾಯಿಯಾಗಿರುವ ಬೃಂದಾ ಅವರಿಗೆ 2023ರ ಫೆಬ್ರವರಿಯಲ್ಲಿ 2ನೇ ಮಗು ಜನಿಸಿತು. ಆ ಮಗುವಿಗೆ ಜನಿಸಿದ ಸಮಯದಲ್ಲೇ ಜಾಂಡಿಸ್ (ಕಾಮಾಲೆ) ತಲುಲಿತ್ತು. ಹೀಗಾಗಿ, ಮಗುವನ್ನು ಎನ್ಐಸಿಯುನಲ್ಲಿ ಇರಿಸಿ, ಆರೈಕೆ ಮಾಡಲಾಗುತ್ತಿತ್ತು. ಬೃಂದಾ ಅವರ ಎದೆ ಹಾಲನ್ನು ಪಂಪ್ ಮಾಡಿ, ಮಗುವಿಗೆ ನೀಡಲಾಗುತ್ತಿತ್ತು. ಈ ವೇಳೆ, ಬೃಂದಾ ಅವರು ತಮ್ಮ ಹೆಚ್ಚವರಿ ಹಾಲನ್ನು ಅದೇ ಎನ್ಐಸಿಯುನಲ್ಲಿದ್ದ ಇತರ ಶಿಶುಗಳಿಗೂ ಒದಗಿಸಲು ನಿರ್ಧರಿಸಿದ್ದರು.
#WATCH | Tiruchirappalli, Tamil Nadu | Selva Brindha says, "… I have donated 300 litres of breast milk. I received entries in the India Book of Records and Asia Book of Records for donating the maximum amount of breast milk by an individual in India. When my second child was… https://t.co/wug1qTSv0B pic.twitter.com/8tOL2mm9H1
— ANI (@ANI) August 6, 2025
ಅಂದು ಅವರು ಮಾಡಿದ ಆ ನಿರ್ಧಾರ, ಅವರು ಈವರೆಗೂ ಎದೆ ಹಾಲನ್ನು ದಾನ ಮಾಡುವಂತೆ ಪ್ರೇರೇಪಿಸಿದೆ. ಅವರು ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯ (MGMGH) ಎದೆ ಹಾಲು ಬ್ಯಾಂಕ್ಗೆ 300.17 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ.
ಈ ವರದಿ ಓದಿದ್ದೀರಾ?: 2,645 ಲೀಟರ್ ಎದೆ ಹಾಲು ದಾನ ಮಾಡಿ 3.5 ಲಕ್ಷ ಶಿಶುಗಳನ್ನು ಉಳಿಸಿದ್ದಾರೆ ಈ ಮಹಿಳೆ
20 ತಿಂಗಳ ಕಾಲ ನಿರಂತರವಾಗಿ ಎದೆ ಹಾಲು ದಾನ ಮಾಡಿರುವ ಬೃಂದಾ ಅವರ ಮಾನವೀಯತೆಯನ್ನು ಎದೆ ಹಾಲು ಬ್ಯಾಂಕ್ನ ಅಧಿಕಾರಿಗಳು ಶ್ಲಾಘಿಸಿದ್ದಾರೆ.ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ‘ವಿಶ್ವ ಸ್ತನ್ಯಪಾನ ವಾರ’ದ ಸಮಾರೋಪ ಕಾರ್ಯಕ್ರಮದಲ್ಲಿ ಬೃಂದಾ ಅವರಿಗೆ ಸನ್ಮಾನ ಮಾಡಲು ನಿರ್ಧರಿಸಿದ್ದಾರೆ.
“ಅವಧಿಪೂರ್ವ ಶಿಶುಗಳಿಗೆ ಎದೆ ಹಾಲು ಔಷಧದಂತೆ ಕೆಲಸ ಮಾಡುತ್ತದೆ. ಇದು ಶಿಶುಗಳ ಆರೋಗ್ಯವನ್ನು ಸುಧಾರಿಸಿ, ಬದುಕಿಗೆ ಆಧಾರವಾಗುತ್ತದೆ,” ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.