ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂತರ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತ ತಂಡ ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಂಗಣದಲ್ಲಿ ಟಿಎಂಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡದ ಅವರು, “ಪಾಪಿಗಳು ಹಾಜರಾದ ಫೈನಲ್ ಪಂದ್ಯ ಬಿಟ್ಟು ಉಳಿದ ಎಲ್ಲ ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಜಯಗಳಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಅಥವಾ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿದ್ದರೆ ನಾವು ಸುಲಭವಾಗಿ ಗೆಲ್ಲುತ್ತಿದ್ದೆವು ಎಂದು ನಾನು ಈ ಸಂದರ್ಭದಲ್ಲಿ ಹೇಳಬಲ್ಲೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?
“ಭಾರತೀಯ ಕ್ರಿಕೆಟ್ ಆಟಗಾರರು ಪಂದ್ಯದ ವೇಳೆ ಕೇಸರಿ ಜೆರ್ಸಿಗಳನ್ನು ಧರಿಸಲಿಲ್ಲ. ಆಟಗಾರರ ಜೆರ್ಸಿ ನೀಲಿ ಬಣ್ಣದ್ದಾಗಿದ್ದು, ಅಭ್ಯಾಸದ ಸಮಯದಲ್ಲಿ ಕಿತ್ತಳೆ ಬಣ್ಣದ ಜೆರ್ಸಿ ಧರಿಸುತ್ತಿದ್ದರು. ಎಲ್ಲ ಫೆಡರೇಶನ್‍ಗಳನ್ನು ರಾಜಕೀಯ ಪಕ್ಷಗಳು ವಶಪಡಿಸಿಕೊಂಡಿವೆ. ಕ್ರಿಕೆಟ್ ಹಾಗೂ ಕಬಡ್ಡಿಯಲ್ಲಿಯೂ ಕೇಸರಿ ಬಣ್ಣವನ್ನು ಬಳಸಲಾಗುತ್ತದೆ. ಕೇಸರಿ ಬಣ್ಣವು ತ್ಯಾಗಿಗಳ ಬಣ್ಣವಾಗಿತ್ತು, ಆದರೆ ನೀವು ಭೋಗಿಗಳು” ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದರು.
ಈ ಮೊದಲು ನ.17 ರಂದು ಇದೇ ವಿಷಯದ ಬಗ್ಗೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಬಿಜೆಪಿ ಭಾರತೀಯ ಕ್ರಿಕೆಟ್ ತಂಡವನ್ನು ಒಳಗೊಂಡಂತೆ ದೇಶಾದ್ಯಂತ ವಿವಿಧ ಸಂಸ್ಥೆಗಳನ್ನು ಕೇಸರಿಕರಣಗೊಳಿಸಿದೆ. ಈಗ ಎಲ್ಲವೂ ಕೇಸರಿ ಬಣ್ಣಕ್ಕೆ ತಿರುಗುತ್ತಿದೆ. ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ ಅಭ್ಯಾಸ ಮಾಡುವಾಗ ಅವರ ಉಡುಗೆ ಕೂಡ ಕೇಸರಿ ಬಣ್ಣಕ್ಕೆ ತಿರುಗಿತು. ಅವರು ಮೊದಲು ನೀಲಿ ಬಣ್ಣವನ್ನು ಧರಿಸುತ್ತಿದ್ದರು” ಎಂದು ಹೇಳಿದ್ದರು.