ದೆಹಲಿ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದ ಘಟನೆ ಪಂಜಾಬ್ – ಹರಿಯಾಣದ ಶಂಭು ಗಡಿಯಲ್ಲಿ ನಡೆದಿದೆ.
ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿ ದೊಡ್ಡ ಪ್ರಮಾಣದ ಹೊಗೆ ಆವರಿಸುತ್ತಿದ್ದು,ಮಾಧ್ಯಮ ಪ್ರತಿನಿಧಿಗಳು ಒಳಗೊಂಡಂತೆ ನೂರಾರು ರೈತರು ಆಶ್ರುವಾಯುವಿನಿಂದ ಪಾರಾಗಲು ಓಡುತ್ತಿದ್ದಾರೆ.
ಇಂದು ಮಧ್ಯಾಹ್ನದ ಸುಮಾರಿನಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗುತ್ತಿದ್ದ ರೈತರ ಮೇಲೆ ಸುಮಾರು 20ಕ್ಕೂ ಹೆಚ್ಚು ಅಶ್ರುವಾಯುಗಳನ್ನು ಸಿಡಿಸಲಾಗಿದೆ.
ಶಂಭು ಗಡಿಯು ದೆಹಲಿಯಿಂದ ಸುಮಾರು 200 ಕಿ.ಮೀ ದೂರದಲ್ಲಿದ್ದು, ನೂರಾರು ಸಂಖ್ಯೆಯಲ್ಲಿ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಜಮಾಯಿಸಿದ್ದಾರೆ. ರೈತರನ್ನು ಚದುರಿಸಲು ಡ್ರೋನ್‌ಗಳ ಮೂಲಕ ಅಶ್ರುವಾಯುಗಳನ್ನು ಪ್ರಯೋಗಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳಿಂದ ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ರೈತರು ರಾಷ್ಟ್ರ ರಾಜಧಾನಿಯತ್ತ ಇಂದು ಬೆಳಗಿನಿಂದ ಸಾಗುತ್ತಿದ್ದಾರೆ.
ಪೊಲೀಸರ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಭಟನಾ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ರೈತರ ದಾರಿಗೆ ಚೂಪಾದ ಕಬ್ಬಿಣದ ಸಲಾಕೆಗಳನ್ನು ಇಡುವುದು ಅಮೃತ ಕಾಲ ಅಥವಾ ಅನ್ಯಾಯಕಾಲವೆ? ಪ್ರಧಾನಿಯವರೆ ದೇಶದ ರೈತರೊಂದಿಗೆ ಏಕೆ ಈ ರೀತಿ ವರ್ತಿಸುತ್ತಿದ್ದೀರಿ? ಏಕೆ ಅವರ ಭರವಸೆಗಳನ್ನು ಈಡೇರಿಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ರೈತ ಸಂಘಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲಿನ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಗೆ ತೆರಳುತ್ತಿವೆ. ರೈತರು ದೆಹಲಿ ಪ್ರವೇಶಿಸದಂತೆ ಪೊಲೀಸರು ಕಾಂಕ್ರೀಟ್ ತಡೆ, ಬ್ಯಾರಿಕೇಡ್ ಮತ್ತು ಮುಳ್ಳುತಂತಿಗಳನ್ನು ಹಾಕಿದ್ದಾರೆ.