ದಕ್ಷಿಣ ಭಾರತದ ನಾನಾ ಭಾಗಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಹೆಚ್ಚಾಗಿದೆ. ಭಾನುವಾರವೂ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದರೆ, ತೆಲಂಗಾಣದಲ್ಲಿ ಮಳೆ ಅನಾಹುತಕ್ಕೆ 12 ಮಂದಿ ಬಲಿಯಾಗಿದ್ದಾರೆ.
ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ತಾಂಡೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಡೈರಿ ಫಾರ್ಮ್‌ನ ಕಾಂಪೌಂಡ್ ಗೋಡೆ ಕುಸಿದು, 10 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.
ಮೃತರನ್ನು ತೋಟದ ಮಾಲೀಕ ಬೆಳ್ಳೆ ಮಲ್ಲೇಶ್ (38), ಅವರ ಪುತ್ರಿ ಅನುಷಾ (10) ಹಾಗೂ ಇಬ್ಬರು ಕಾರ್ಮಿಕರಾದ ಎಸ್ ರಾಮುಲು (35) ಮತ್ತು ಅವರ ಪತ್ನಿ ಚೆನ್ನಮ್ಮ (34) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೈದರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೈದರಾಬಾದ್‌ನ ಹಫೀಜ್‌ಪೇಟೆಯ ಸಾಯಿ ನಗರದಲ್ಲಿ ಮನೆಯ ಬಾಲ್ಕಾನಿಯ ಛಾವಣಿ ಕುಸಿದು ಮೂರು ವರ್ಷದ ಬಾಲಕ ಮತ್ತು 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಅದೇ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ರಶೀದ್ ಎಂಬಾತನ ವಿರುದ್ಧ ಇಟ್ಟಿಗೆಗಳು ಬಿದ್ದು, ಆತ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇನ್ನು, ತೆಲಕಪಲ್ಲಿ ಮಂಡಲ ಪ್ರದೇಶದಲ್ಲಿ 12 ವರ್ಷದ ಬಾಲಕ ದಂಡು ಲಕ್ಷ್ಮಣ್ ಸಾವನ್ನಪ್ಪಿದ್ದು, ನಾಗರಕರ್ನೂಲ್ ಜಿಲ್ಲೆಯ ನೂಕಲಚಿಂತಾ ತಾಂಡಾದಲ್ಲಿ ಸಿಡಿಲು ಬಡಿದು ಜೈಪಾಲ್ ನಾಯ್ಕ್ ಎಂಬಾತ ಗಾಯಗೊಂಡಿದ್ದಾರೆ. ನಂದಿವಡ್ಡೆಮಾನ್ ಪಲ್ಲಿಯಲ್ಲಿ ಕಬ್ಬಿಣದ ಶೆಡ್ ಬಿದ್ದು ವೇಣು (38) ಎಂಬವರು ಮೃತಪಟ್ಟಿದ್ದಾರೆ.
ಇದೇ ವೇಳೆ, ಸಿದ್ದಿಪೇಟೆ ಜಿಲ್ಲೆಯ ಮುಳುಗು ಮಂಡಲದ ಕ್ಷೀರಸಾಗರದಲ್ಲಿ ಕೋಳಿ ಫಾರಂನ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತರನ್ನು ಗೌರಿ ಶಂಕರ್ (45) ಮತ್ತು ಭಾಗ್ಯಮ್ಮ (40) ಎಂದು ಗುರುತಿಸಲಾಗಿದೆ.
ಮೇಡ್ಚಲ್ ಜಿಲ್ಲೆಯ ಕೀಸರದಲ್ಲಿ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ನಾಗರಕರ್ನೂಲ್, ವಿಕಾರಾಬಾದ್, ಕಾಮರೆಡ್ಡಿ ಮತ್ತು ಯಾದಾದ್ರಿ-ಭುವನಗಿರಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.